ಇರಾನ್ ಯುದ್ಧದ ಪ್ರಭಾವ ವಿಶ್ವದ ಮೇಲೆ: ಇಂಧನ ಬೆಲೆ ಏರಿಕೆ, ಪೂರೈಕೆ ಅಸ್ತವ್ಯಸ್ತ

ಅಂತಾರಾಷ್ಟ್ರೀಯ:ಇರಾನ್ ವಿರುದ್ಧ ಅಮೆರಿಕಾ ಮತ್ತು ಇಸ್ರೇಲ್ ಸಾರಿರುವ ಯುದ್ದ ಜಗತ್ತಿನಾದ್ಯಂತ ಪರಿಣಾಮ ಬೀರಲು ಆರಂಭ ಮಾಡಿದೆ. ಇಂಧನ ಬೆಲೆಗಳು ಹೆಚ್ಚಲಾರಂಭಿಸಿದ್ದು, ಪೂರೈಕೆ ಜಾಲ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ತೈಲದ ಮೇಲೆ ಹೇರಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ಪ್ರಮಾಣವನ್ನು ಕಡಿತ ಮಾಡಿದೆ.

ಭಾರತ ಸರಕಾರ ತೈಲೋತ್ಪನ್ನಗಳ ಮೇಲೆ ವಿಧಿಸಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ಪ್ರಮಾಣವನ್ನು ಕಡಿತ ಮಾಡಿ ಆದೇಶ ಹೊರಡಿಸಿದೆ. ತೈಲ ಮತ್ತು ಆ ಸಂಬಂಧಿತ ಉತ್ಪನ್ನಗಳ ಪೂರೈಕೆ ಜಾಲದಲ್ಲಿ ಅಸ್ಯವ್ಯಸ್ತ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಇರಾನ್ ಮೇಲಿನ ಯುದ್ದಕ್ಕೆ ಅಮೆರಿಕಾ ಮತ್ತೆ ಹತ್ತು ದಿನಗಳ ವಿರಾಮ ಘೋಷಿಸಿದೆ. ನಾವು ಈಗಾಗಲೇ ಯುದ್ದ ಗೆದ್ದಿದ್ದೇವೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹರಾನಿನ ನೌಕಾ ಮತ್ತು ಕ್ಷಿಪಣಿ ಸಾಮರ್ಥ್ಯ ಬಹಳಷ್ಟು ಕುಗ್ಗಿದೆ ಎಂದೂ ಹೇಳಿದ್ದಾರೆ.

ಇರಾನಿನ ಪರವಾಗಿ ನಮ್ಮ ಜೊತೆ ಸಂಪರ್ಕದಲ್ಲಿರುವವರು ಇನ್ನಷ್ಟು ಕಾಲಾವಕಾಶ ಕೊಡಬಹುದೇ ಎಂದು ವಿನಂತಿ ಮಾಡಿದ್ದಾರೆ. ಅವರು ಏನು ಮಾಡಬೇಕಾಗಿದೆಯೋ ಅದನ್ನು ಮಾಡದಿದ್ದರೆ ನಾನು ಅವರ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುತ್ತೇನೆ ಎಂದೂ ಟ್ರಂಪ್ ಹೇಳಿದ್ದಾರೆ. ಅವರ ಕೋರಿಕೆಯ ಮೇರೆಗೆ ಹತ್ತು ದಿನಗಳ ಕಾಲ ಅಂದರೆ ಏಪ್ರಿಲ್ ಆರರವರೆಗೆ ದಾಳಿ ಕಾರ್ಯಾಚರಣೆ ಸ್ಥಗಿತ ಮಾಡಿರುವುದಾಗಿಯೂ ಅವರು ಹೇಳಿದ್ದಾರೆ.ಇತ್ತ ಇರಾನ್ ತನಗೆ ಹದಿನೈದು ಅಂಶಗಳ ಪಟ್ಟಿ ಬಂದಿದೆ, ಆದರೆ ಅದು ಏಕಪಕ್ಷೀಯವಾಗಿದೆ ಎಂದು ಹೇಳಿದೆ.

ಯುದ್ದದ ಪರಿಣಾಮ ದಿನದಿಂದ ದಿನಕ್ಕೆ ಜನಜೀವನ ಕಷ್ಟವಾಗುತ್ತಿದೆ. ಬಹುತೇಕ ರಾಷ್ಟ್ರಗಳನ್ನು ಬೆಲೆ ಏರಿಕೆ ಬಾಧಿಸುತ್ತಿದೆ. ಇರಾನಿನ ಜನರಂತೂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಣದುಬ್ಬರ ಮುಗಿಲು ಮುಟ್ಟಿದೆ. ಅಂತರ್ಜಾಲ ನಿರ್ಬಂಧದಿ0ದಾಗಿ ಅಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದು ಹೊರ ಜಗತ್ತಿಗೆ ತಿಳಿಯುತ್ತಿಲ್ಲ.

ಇತ್ತ ಯುದ್ದ ನಾಳೆಯೇ ನಿಂತರೂ ತೈಲ ಪೂರೈಕೆ ಯಥಾಸ್ಥಿತಿಗೆ ಬರಲು ಮೂರರಿಂದ ನಾಲ್ಕು ತಿಂಗಳಾದರೂ ಬೇಕಾಗುತ್ತದೆ. ಸಂಸ್ಕ್ರಣಾಗಾರಗಳ ಮೇಲಿನ ದಾಳಿ ತೈಲ ಸಂಸ್ಕರಣೆಯ ಸಾಮರ್ಥ್ಯವನ್ನು ಕುಗ್ಗಿಸಿದೆ. ತೈಲ ಬಾವಿಗಳಿಂದ ತೈಲ ತೆಗೆಯುವಿಕೆ ಯಥಾಸ್ಥಿತಿಗೆ ಬರುವುದಕ್ಕೂ ಕಾಲಾವಕಾಶ ಬೇಕಾಗುತ್ತದೆ. ಮಧ್ಯಪ್ರಾಚ್ಯದ ಯುದ್ದದ ದುಷ್ಪರಿಣಾಮಗಳು ನಿಧಾನವಾಗಿ ವಿಶ್ವದ ಉದ್ದಕ್ಕೂ ವ್ಯಾಪಿಸತೊಡಗಿವೆ. ವಾಯುಯಾನ ದುಬಾರಿಯಾಗಿದೆ. ಕೆಲವು ದೇಶಗಳಲ್ಲಿ ಸುರಕ್ಷೆಯೇ ಸವಾಲಾಗಿದೆ. ಕ್ಷಿಪಣಿಗಳ ಅವಶೇಷಗಳು ಗಂಭೀರ ಪರಿಸರ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!