ಬ್ರಿಕ್ಸ್ ಶೃಂಗಸಭೆಗೂ ಮುನ್ನ ಭಾರತಕ್ಕೆ ಜಾಗತಿಕ ಗಮನ: ಕ್ಸಿ ಜಿನ್‌ಪಿಂಗ್, ಪುಟಿನ್ ಭೇಟಿ ಸಾಧ್ಯತೆ

ಈ ವರ್ಷದ ಬ್ರಿಕ್ಸ್ (BRICS) ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳುತ್ತಿರುವ ಹಿನ್ನೆಲೆ, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೇಶ ಮತ್ತೊಮ್ಮೆ ಕೇಂದ್ರಬಿಂದುವಾಗಿದ್ದು, ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಚರ್ಚೆಗಳ ಜೊತೆಗೆ, ಭಾರತ-ಚೀನಾ ನಡುವಿನ ದೀರ್ಘಕಾಲದ ಬಿಕ್ಕಟ್ಟಿನ ಸಂಬಂಧಗಳಿಗೆ ಹೊಸ ತಿರುವು ಸಿಗುವ ಸಾಧ್ಯತೆಯೂ ಈ ಸಮ್ಮೇಳನದಿಂದ ಮೂಡಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುವ ಸಾಧ್ಯತೆ ದಟ್ಟವಾಗಿದ್ದು, ಅವರು ದೆಹಲಿಗೆ ಭೇಟಿ ನೀಡಿದರೆ 2019ರ ಮಹಾಬಲಿಪುರಂ ಸಭೆಯ ಬಳಿಕ ಭಾರತಕ್ಕೆ ನೀಡುವ ಮೊದಲ ಭೇಟಿ ಇದಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಗಡಿ ಉದ್ವಿಗ್ನತೆಯಿಂದ ತಣ್ಣಗಾಗಿದ್ದ ಉಭಯ ದೇಶಗಳ ಸಂಬಂಧಗಳಿಗೆ ಈ ಭೇಟಿ ಹೊಸ ಚೈತನ್ಯ ತುಂಬುವ ನಿರೀಕ್ಷೆ ವ್ಯಕ್ತವಾಗಿದೆ.

ಇದೇ ವೇಳೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯೂ ಬಹುತೇಕ ಖಚಿತಗೊಂಡಿದೆ. ರಷ್ಯಾದ ಮಾಧ್ಯಮಗಳ ವರದಿ ಪ್ರಕಾರ, ಪುಟಿನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಭಾರತ-ರಷ್ಯಾ ನಡುವಿನ ದಶಕಗಳ ವ್ಯೂಹಾತ್ಮಕ ಬಾಂಧವ್ಯ ಮತ್ತೊಮ್ಮೆ ಬಲಪಡಿಸುವ ಸಾಧ್ಯತೆ ಇದೆ.

2020ರ ಗಾಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಭಾರತ-ಚೀನಾ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದವು. ಗಡಿಯಲ್ಲಿನ ಮಿಲಿಟರಿ ನಿಯೋಜನೆ, ಆರ್ಥಿಕ ನಿರ್ಬಂಧಗಳು ಹಾಗೂ ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿಂದ ಸಂಬಂಧಗಳಲ್ಲಿ ಬಿರುಕು ಮೂಡಿತ್ತು. ಆದರೆ ಬ್ರಿಕ್ಸ್ ವೇದಿಕೆಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ, ಗಡಿ ವಿವಾದಗಳ ಶಾಂತಿಯುತ ಪರಿಹಾರ ಹಾಗೂ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ದಾರಿ ತೆರೆದುಕೊಳ್ಳಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಸೆಪ್ಟೆಂಬರ್ ತಿಂಗಳು ಭಾರತದ ಪಾಲಿಗೆ ರಾಜತಾಂತ್ರಿಕವಾಗಿ ಮಹತ್ವದ ಘಟ್ಟವಾಗಲಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ನವದೆಹಲಿಯಲ್ಲಿ ಒಂದೇ ವೇದಿಕೆಯಲ್ಲಿ ಸೇರುವುದು ಜಾಗತಿಕ ದಕ್ಷಿಣ ರಾಷ್ಟ್ರಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಪ್ರಾದೇಶಿಕ ಉದ್ವಿಗ್ನತೆ ತಗ್ಗಿಸಲು ಸಹಕಾರಿಯಾಗಲಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!