ಅಮೆರಿಕಾ–ಇರಾನ್ ಮಧ್ಯಂತರ ಶಾಂತಿ ಒಪ್ಪಂದ: ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ

ವಾಷಿಂಗ್ಟನ್/ತೆಹ್ರಾನ್, : ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದ ಅಮೆರಿಕಾ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು, ಉಭಯ ರಾಷ್ಟ್ರಗಳು ಮಧ್ಯಂತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಬೆಳವಣಿಗೆಯಿಂದ ಜಾಗತಿಕ ತೈಲ ಪೂರೈಕೆ ಸರಪಳಿ ಪುನಃ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ವ್ಯಕ್ತವಾಗಿದೆ.

ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ ಆರಂಭಿಕ ಮಾತುಕತೆಗಳು ಸ್ವಿಟ್ಜರ್‌ಲ್ಯಾಂಡ್‌ನ ಬ್ಯೂರ್ಗೆನ್‌ಸ್ಟಾಕ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಮಾತುಕತೆಯಲ್ಲಿ ಮಧ್ಯವರ್ತಿಗಳಾದ ಪಾಕಿಸ್ತಾನ, ಕತಾರ್ ಹಾಗೂ ಇತರ ಭಾಗಿಯಾಗಿರುವ ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.

ಇರಾನ್ ಮತ್ತು ಅಮೆರಿಕಾ ನಾಯಕರು ಮಧ್ಯಪ್ರಾಚ್ಯ ಯುದ್ಧ ಅಂತ್ಯಗೊಳಿಸುವ ಉದ್ದೇಶದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪಾಕಿಸ್ತಾನ ದೃಢಪಡಿಸಿದೆ. “ಒಪ್ಪಂದ ತಕ್ಷಣದಿಂದಲೇ ಜಾರಿಗೆ ಬರಲಿದೆ” ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

ಒಪ್ಪಂದದ ಭಾಗವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಿದ್ದು, ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ಹಿಂತೆಗೆದುಕೊಳ್ಳಲಿದೆ ಎಂದು ಷರೀಫ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಕತಾರ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತ ಸಹಿ ಸಮಾರಂಭವನ್ನು ಆಯೋಜಿಸುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಇದೇ ವೇಳೆ, ಜಿ-7 ಶೃಂಗಸಭೆಯ ವೇಳೆ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯತ್ತ ಸಾಗುತ್ತಿತ್ತು. ಅದನ್ನು ತಡೆಯುವಲ್ಲಿ ಅಮೆರಿಕಾ ಪ್ರಮುಖ ಪಾತ್ರ ವಹಿಸಿದೆ” ಎಂದು ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ಒಪ್ಪಂದವನ್ನು ಸ್ವಾಗತಿಸಿದ್ದು, “ಇದು ಶಾಶ್ವತ ಶಾಂತಿಯತ್ತ ಸಾಗುವ ಮಹತ್ವದ ಹೆಜ್ಜೆಯಾಗಿದ್ದು, ಹಾರ್ಮುಜ್ ಜಲಸಂಧಿ ಪುನಃ ತೆರೆಯುವುದರಿಂದ ಜಾಗತಿಕ ಇಂಧನ ಮಾರುಕಟ್ಟೆಗೆ ಸ್ಥಿರತೆ ಸಿಗಲಿದೆ” ಎಂದು ತಿಳಿಸಿದ್ದಾರೆ.

ಅಮೆರಿಕದ ಅಧಿಕಾರಿಗಳ ಮಾಹಿತಿ ಪ್ರಕಾರ, ಒಪ್ಪಂದದಡಿ ಇರಾನ್ ತನ್ನ ಉನ್ನತ ಮಟ್ಟದಲ್ಲಿ ಸಂಗ್ರಹಿಸಿರುವ ಯುರೇನಿಯಂ ದಾಸ್ತಾನನ್ನು ಕಡಿಮೆಗೊಳಿಸಬೇಕಾಗುತ್ತದೆ. ಪ್ರತಿಯಾಗಿ ಕೆಲವು ಆರ್ಥಿಕ ನಿರ್ಬಂಧಗಳಲ್ಲಿ ಸಡಿಲಿಕೆ ನೀಡಲಾಗುವುದು. ಆದರೆ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದಿಲ್ಲ.

ಇದಲ್ಲದೆ, ಹಾರ್ಮುಜ್ ಜಲಸಂಧಿಯನ್ನು ಎರಡು ತಿಂಗಳ ಕಾಲ ಟೋಲ್-ಮುಕ್ತವಾಗಿ ತೆರೆಯಲು ಒಪ್ಪಂದದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಲೆಬನಾನ್‌ನ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಬದ್ಧತೆಯನ್ನೂ ಪುನರುಚ್ಚರಿಸಲಾಗಿದೆ.

ಮಧ್ಯಂತರ ಶಾಂತಿ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ದಿಸೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!