ವಾಷಿಂಗ್ಟನ್: ಕಳೆದ ಸುಮಾರು 35 ವರ್ಷಗಳಿಂದ ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನವಾಗಿ ಸೇವೆ ಸಲ್ಲಿಸುತ್ತಿದ್ದ ಬೋಯಿಂಗ್ 747-200B ವಿಮಾನ ತನ್ನ ಅಂತಿಮ ಹಾರಾಟವನ್ನು ಪೂರ್ಣಗೊಳಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ರಾನ್ಸ್ ಭೇಟಿಯೊಂದಿಗೆ ಅದರ ಸೇವೆ ಅಂತ್ಯಗೊಂಡಿದೆ.
ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅವರ ಅವಧಿಯಿಂದ ಆರಂಭಗೊಂಡು ಬಳಿಕ ಅಧಿಕಾರಕ್ಕೆ ಬಂದ ಎಲ್ಲ ಅಮೆರಿಕ ಅಧ್ಯಕ್ಷರಿಗೆ ಈ ವಿಮಾನ ಸೇವೆ ಸಲ್ಲಿಸಿತ್ತು. ಶ್ವೇತಭವನದ ಅಧಿಕಾರಿಗಳು ಇದನ್ನು “ಕೊನೆಯ ಪ್ರಯಾಣ” ಎಂದು ಬಣ್ಣಿಸಿದ್ದು, ಜಂಟಿ ವಾಯು ನೆಲೆ ಆಂಡ್ರ್ಯೂಸ್‌ನಲ್ಲಿ ವಿಮಾನದ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಅಮೆರಿಕದ ಶಿಷ್ಟಾಚಾರದ ಮುಖ್ಯಸ್ಥೆ ಮೋನಿಕಾ ಕ್ರೌಲಿ, ಸುಮಾರು ನಾಲ್ಕು ದಶಕಗಳ ಕಾಲ ಅಧ್ಯಕ್ಷರಿಗೆ ಸೇವೆ ಸಲ್ಲಿಸಿದ ಈ ವಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿದಾಯ ಕೋರಿದ್ದಾರೆ.
ಇದೇ ವೇಳೆ, ಕತಾರ್ ಉಡುಗೊರೆಯಾಗಿ ನೀಡಿರುವ ಬೋಯಿಂಗ್ 747 ವಿಮಾನದ ಮಾರ್ಪಾಡು ಮತ್ತು ಹಾರಾಟ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಅಧ್ಯಕ್ಷರ ಪ್ರಯಾಣಕ್ಕೆ ಬಳಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷರನ್ನು ಹೊತ್ತೊಯ್ಯುವ ಯಾವುದೇ ವಿಮಾನಕ್ಕೆ ‘ಏರ್ ಫೋರ್ಸ್ ಒನ್’ ಎಂಬ ವಿಶೇಷ ಕರೆನಾಮೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.