ಮಾರ್ಗದೀಪ ಸಾಂಸ್ಕೃತಿಕ ಸಮಿತಿಯಿಂದ ಪುಣೆ ರೆಸಿಡೆನ್ಸಿಯಲ್ಲಿ ಪ್ರಚಾರ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ
ದುಬೈ, ಜು. 2: ಪ್ರತಿಷ್ಠಿತ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ಸೆಪ್ಟೆಂಬರ್ 20, 2026ರಂದು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ಹಾಲ್ನಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ಕೆ ದುಬೈಯ ಪುಣೆ ರೆಸಿಡೆನ್ಸಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಂಧ್ಯಾ ಕ್ರಿಯೇಷನ್ಸ್ನ ಮುಖ್ಯಸ್ಥ ಶೋಧನ ಪ್ರಸಾದ್ ಹಾಗೂ ರಾಮಕ್ಷತ್ರಿಯ ಸಂಘ ಯುಎಇ ಉಪಾಧ್ಯಕ್ಷ ಲಕ್ಷ್ಮೀಶ್ ಚೇತನ್ ಭಾಗವಹಿಸಿ, ಸಾರ್ವಜನಿಕ ಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಮುಖ್ಯ ಸಂಚಾಲಕರಾಗಿ ಸುಗಂಧರಾಜ್ ಬೇಕಲ್ ಹಾಗೂ ಅಜಿತ್ ಕೊರಕೋಡು ಅವರನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲ್ವಿಚಾರಕರಾಗಿ ಸತೀಶ್ ಅವರನ್ನು ಮತ್ತು ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಸ್ಮಿತಾ ಗಣೇಶ್ ರಾವ್ ಅವರನ್ನು ನೇಮಕ ಮಾಡಲಾಯಿತು.
ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಮಹೇಶ್ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನಿಲ್ ರಾವ್, ಕೋಶಾಧಿಕಾರಿ ರಾಜೇಶ್ ರಾವ್ (ಪುಣೆ), ಜಂಟಿ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಕ್ರೀಡಾ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸಮಿತಿಯು ಈಗಾಗಲೇ ವಿವಿಧ ಉಪಸಮಿತಿಗಳನ್ನು ರಚಿಸಿದ್ದು, ದುಬೈ ಸೇರಿದಂತೆ ಯುಎಇಯ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಲಾಗಿದೆ.


