ವಾಷಿಂಗ್ಟನ್: ಇರಾನ್ ವಿರುದ್ಧ ಜಾರಿಯಲ್ಲಿರುವ ನೌಕಾ ನಿರ್ಬಂಧವನ್ನು ಉಲ್ಲಂಘಿಸಿ ಸಂಚರಿಸಲು ಯತ್ನಿಸಿದ್ದ ಮೂರು ವಾಣಿಜ್ಯ ಹಡಗುಗಳನ್ನು ಅಮೆರಿಕದ ಪಡೆಗಳು ತಡೆದಿವೆ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ತಿಳಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರಕಟಣೆ ನೀಡಿರುವ ಸೆಂಟ್‌ಕಾಮ್, ಎರಡು ಹಡಗುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಆದೇಶ ಪಾಲಿಸದ ಒಂದು ಹಡಗನ್ನು ನಿಷ್ಕ್ರಿಯಗೊಳಿಸಲಾಗಿದೆ. ಮತ್ತೊಂದು ಹಡಗನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದು ನಿಯಮ ಪಾಲನೆ ಖಚಿತಪಡಿಸಲಾಗಿದೆ ಎಂದು ತಿಳಿಸಿದೆ.

ಸೆಂಟ್‌ಕಾಮ್ ಮಾಹಿತಿ ಪ್ರಕಾರ, ಜುಲೈ 16ರಂದು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ 11ನೇ ಮೆರೈನ್ ಎಕ್ಸ್‌ಪಿಡಿಷನರಿ ಯುನಿಟ್ ಸಿಬ್ಬಂದಿ ಎಂ/ಟಿ ವೆನ್ ಯಾವೋ (M/T Wen Yao) ಹಡಗಿನಲ್ಲಿ ಪರಿಶೀಲನಾ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳವಾರದಿಂದ ಇರಾನ್ ಬಂದರುಗಳಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ಹೊರಡುವ ಹಡಗುಗಳ ಮೇಲೆ ಅಮೆರಿಕ ಮತ್ತೆ ನೌಕಾ ನಿರ್ಬಂಧ ಜಾರಿಗೊಳಿಸಿದ್ದು, ಹಾರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ಸಮುದ್ರ ಮಾರ್ಗಗಳು ಸಾಮಾನ್ಯ ಹಡಗು ಸಂಚಾರಕ್ಕೆ ಮುಕ್ತವಾಗಿದ್ದರೂ, ನಿರ್ಬಂಧ ಉಲ್ಲಂಘಿಸುವ ಹಡಗುಗಳಿಗೆ ಮಾತ್ರ ಕ್ರಮ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಇದಕ್ಕೂ ಮುನ್ನ, ಅರೇಬಿಯನ್ ಕೊಲ್ಲಿಯಲ್ಲಿ ಇರಾನ್‌ನ ಖಾರ್ಗ್ ದ್ವೀಪದತ್ತ ಸಾಗುತ್ತಿದ್ದ ಎಂ/ಟಿ ಬೆಲ್ಮಾ (M/T Belma) ತೈಲ ಟ್ಯಾಂಕರ್ ಅಮೆರಿಕದ ನೌಕಾ ನಿರ್ಬಂಧವನ್ನು ಉಲ್ಲಂಘಿಸಲು ಯತ್ನಿಸಿದೆ ಎಂದು ಸೆಂಟ್‌ಕಾಮ್ ಆರೋಪಿಸಿತ್ತು. ಹಲವು ಬಾರಿ ಎಚ್ಚರಿಕೆ ನೀಡಿದರೂ ಹಡಗು ಮಾರ್ಗ ಬದಲಿಸದ ಹಿನ್ನೆಲೆಯಲ್ಲಿ, ವಿಮಾನದಿಂದ ಹೆಲ್‌ಫೈರ್ ಕ್ಷಿಪಣಿ ಬಳಸಿ ಅದರ ಹೊಗೆ ಕೊಳವೆಯನ್ನು ಗುರಿಯಾಗಿಸಿ ಹಡಗನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಅಂತ್ಯಗೊಂಡಿರುವುದಾಗಿ ಘೋಷಿಸಿದ ಬಳಿಕ, ಅಮೆರಿಕದ ಪಡೆಗಳು ಸತತ ಆರು ದಿನಗಳಿಂದ ಇರಾನ್‌ನ ವಿವಿಧ ಸೇನಾ ಗುರಿಗಳ ಮೇಲೆ ದಾಳಿ ನಡೆಸುತ್ತಿವೆ. ಬುಧವಾರ ಎರಡು ಹಂತಗಳಲ್ಲಿ ನಡೆದ ವಾಯುದಾಳಿಗಳು ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಬೆದರಿಕೆ ಒಡ್ಡಲು ಬಳಸಲಾಗುತ್ತಿದ್ದ ಇರಾನ್‌ನ ಸೇನಾ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡಿದ್ದವು ಎಂದು ಸೆಂಟ್‌ಕಾಮ್ ತಿಳಿಸಿದೆ.


