ಟೆಲ್ ಅವಿವ್, ಇಸ್ರೇಲ್: ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್ ನಡೆಸಿದ ಎನ್ನಲಾದ ವಿಧ್ವಂಸಕ ಕೃತ್ಯದ ಯತ್ನವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಡೆದಿದ್ದಾರೆ ಎಂದು ವರದಿಯಾಗಿದೆ.

ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಸಹ ಪೈಲಟ್ ಯತ್ನಿಸಿದ ವೇಳೆ ಕ್ಯಾಪ್ಟನ್ ಮಚ್ಚಾರ್ ಅವರನ್ನು ಎದುರಿಸಿ ತಡೆದಿದ್ದಾರೆ. ಈ ವೇಳೆ ಉಂಟಾದ ಸಂಘರ್ಷದಲ್ಲಿ ಮಚ್ಚಾರ್ ಅವರಿಗೆ ಚಾಕುವಿನಿಂದ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದರೂ ಕಾಕ್‌ಪಿಟ್‌ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಅವರು ಪ್ರಯತ್ನಿಸಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪ್ರಯಾಣಿಕರು ಅವರನ್ನು ಶ್ಲಾಘಿಸಿದ್ದಾರೆ.
ಘಟನೆಯಿಂದ ಕೆಲಕಾಲ ವಿಮಾನ ಅಪಹರಣದ ಆತಂಕವೂ ಉಂಟಾಗಿತ್ತು. ಆದರೆ ಬಳಿಕ ಆ ಸಾಧ್ಯತೆಯನ್ನು ತಳ್ಳಿಹಾಕಲಾಯಿತು. ಇತರ ಪೈಲಟ್‌ಗಳು ಕಾಕ್‌ಪಿಟ್‌ನ ನಿಯಂತ್ರಣವನ್ನು ವಹಿಸಿಕೊಂಡು ವಿಮಾನವನ್ನು ಸೌದಿ ಅರೇಬಿಯಾದಲ್ಲಿನ ಪರ್ಯಾಯ ಸ್ಥಳವೊಂದರಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಪ್ರಜೆಯಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಳೆದ ನಾಲ್ಕು ವರ್ಷಗಳಿಂದ ಯುಎಇ ಸರ್ಕಾರದ ಒಡೆತನದ ಕಡಿಮೆ ದರದ ವಿಮಾನಯಾನ ಸಂಸ್ಥೆ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಸುಮಾರು 10 ವರ್ಷಗಳ ಕಾಲ ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದರು.
ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಬೋಯಿಂಗ್ 737 ವಿಮಾನಗಳ ಕಾರ್ಯಾಚರಣೆಯಲ್ಲಿ ಅವರಿಗೆ 13 ವರ್ಷಗಳಿಗೂ ಹೆಚ್ಚು ವಾಣಿಜ್ಯ ವಿಮಾನಯಾನ ಅನುಭವವಿದೆ. ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಆಗಿಯೂ ಸೇವೆ ಸಲ್ಲಿಸಿರುವ ಅವರು 9,750ಕ್ಕೂ ಅಧಿಕ ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. 2011ರಲ್ಲಿ ಸ್ಪೈಸ್‌ಜೆಟ್‌ಗೆ ಸೇರ್ಪಡೆಯಾಗಿದ್ದ ಮಚ್ಚಾರ್ ಬಳಿಕ ಫ್ಲೈದುಬೈನಲ್ಲಿ ಪೈಲಟ್ ಆಗಿ ಸೇವೆ ಮುಂದುವರಿಸಿದ್ದರು.


