ನವದೆಹಲಿ: ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಇ-ಫಾರ್ಮಸಿಗಳು ಹಾಗೂ ಎಐ (AI) ತಂತ್ರಜ್ಞಾನ ಬಳಸಿ ನಕಲಿ ವೈದ್ಯರ ಪ್ರಿಸ್ಕ್ರಿಪ್ಷನ್ಗಳನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಧಕ್ಕೆಯುಂಟಾಗುತ್ತಿದೆ ಎಂದು ಆರೋಪಿಸಿ, ಮೇ 20ರಂದು ದೇಶಾದ್ಯಂತ ಮೆಡಿಕಲ್ ಶಾಪ್ಗಳ ಬಂದ್ಗೆ ಔಷಧ ವ್ಯಾಪಾರಿಗಳ ಸಂಘಟನೆಗಳು ಕರೆ ನೀಡಿವೆ.
‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್’ (AIOCD) ಮತ್ತು ‘ತೆಲಂಗಾಣ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್’ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ದೇಶದಾದ್ಯಂತ ಸುಮಾರು 12.40 ಲಕ್ಷಕ್ಕೂ ಅಧಿಕ ಕೆಮಿಸ್ಟ್ಗಳು ಹಾಗೂ ಔಷಧ ವಿತರಕರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಇ-ಫಾರ್ಮಸಿಗಳು, ಆನ್ಲೈನ್ ಮೂಲಕ ಮನಬಂದಂತೆ ಆಂಟಿಬಯೋಟಿಕ್ ಹಾಗೂ ವ್ಯಸನಕಾರಿ ಔಷಧಿಗಳ ಮಾರಾಟ, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ನಕಲಿ ಪ್ರಿಸ್ಕ್ರಿಪ್ಷನ್ಗಳ ಸೃಷ್ಟಿ ಮತ್ತು ಕಾರ್ಪೊರೇಟ್ ಸಂಸ್ಥೆಗಳು ನೀಡುತ್ತಿರುವ ಭಾರಿ ರಿಯಾಯಿತಿಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಈ ಬೆಳವಣಿಗೆಗಳಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಔಷಧ ಅಂಗಡಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಔಷಧ ವಿತರಣಾ ಕ್ಷೇತ್ರದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.