ಸತತ 2ನೇ ಬಾರಿ RCB ಗೆ ಐಪಿಎಲ್ ಚಾಂಪಿಯನ್ ಪಟ್ಟ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳನ್ನು ಕಲೆಹಾಕಿತು.

ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಪ್ರದರ್ಶನ ನೀಡಿ 37 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಆರ್‌ಸಿಬಿ ಬೌಲರ್‌ಗಳ ದಾಳಿಯ ಮುಂದೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲರಾದರು.

ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್ ಕಬಳಿಸಿದರೆ, ರಸಿಕ್ ಸಲಾಂ ದಾರ್ ಮೂರು ವಿಕೆಟ್ ಪಡೆದು ಮಿಂಚಿದರು. ಕೃನಾಲ್ ಪಾಂಡ್ಯ ಒಂದು ವಿಕೆಟ್ ತಮ್ಮದಾಗಿಸಿಕೊಂಡರು. ಈ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್, ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಕಗಿಸೊ ರಬಾಡ ಅವರ ದಾಖಲೆಯನ್ನು ಸರಿಗಟ್ಟಿದರು.

156 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭಿಕ ಹಂತದಲ್ಲೇ ಕೆಲವು ವಿಕೆಟ್‌ಗಳ ಆಘಾತ ಎದುರಾದರೂ, ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟವಾಡಿ ಅಜೇಯ 75 ರನ್ ಗಳಿಸಿದರು. ಅವರಿಗೆ ವೆಂಕಟೇಶ್ ಅಯ್ಯರ್ 32 ರನ್‌ಗಳ ಉಪಯುಕ್ತ ಕೊಡುಗೆ ನೀಡಿ ಉತ್ತಮ ಸಾಥ್ ನೀಡಿದರು.

ಕೊಹ್ಲಿ ಮತ್ತು ವೆಂಕಟೇಶ್ ಅವರ ನಿರ್ಣಾಯಕ ಇನ್ನಿಂಗ್ಸ್ ನೆರವಿನಿಂದ ಆರ್‌ಸಿಬಿ ತಂಡವು 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗುರಿ ತಲುಪಿತು. ಇದರೊಂದಿಗೆ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!