ಮದ್ಯಪಾನ ಮಾಡಿ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ ಪತಿಯನ್ನು ಕೊಂದು ಮನೆಯ ಬಾತ್‌ರೂಮ್‌ನಲ್ಲಿ ಹೂತಿಟ್ಟ ಪತ್ನಿ; ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ

ಉತ್ತರಪ್ರದೇಶ; ಉತ್ತರಪ್ರದೇಶದ ಆಗ್ರಾ ದಲ್ಲಿ ಪತಿಯ ನಿರಂತರ ಹಲ್ಲೆಯಿಂದ ಬೇಸತ್ತ ಪತ್ನಿಯೊಬ್ಬಳು, ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ ಬಳಿಕ ಪತಿಯನ್ನು ಕೊಂದು ಮನೆಯ ಬಾತ್‌ರೂಮ್‌ನಲ್ಲೇ ಹೂತಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಸುಮಾರು 45 ದಿನಗಳ ತನಿಖೆಯ ಬಳಿಕ ಪೊಲೀಸರು 44 ವರ್ಷದ ಪತಿಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮನೆಯ ಬಾತ್‌ರೂಮ್‌ನಲ್ಲಿ ಹೊಸದಾಗಿ ಸಿಮೆಂಟ್ ಮತ್ತು ಟೈಲ್ಸ್ ಅಳವಡಿಸಿರುವುದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಯಿತು. ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೇ 18ರಂದು ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿಯನ್ನು ಪ್ರಜ್ಞೆ ತಪ್ಪಿಸಿದ ನಂತರ ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಪತ್ನಿ ರೂಬಿ ಶರ್ಮಾ ತಪ್ಪೊಪ್ಪಿಕೊಂಡಿದ್ದಾರೆ.

ಕೊಲೆ ನಡೆದ ಬಳಿಕ, ಮೇ 18ರಂದು ಪತಿ ಕಾಣೆಯಾಗಿದ್ದಾರೆ ಎಂದು ರೂಬಿ ಶರ್ಮಾ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಈ ಪ್ರಕರಣದ ತನಿಖೆಗಾಗಿ ಸಿಕಂದ್ರ ಪೊಲೀಸ್ ಠಾಣೆ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಈ ಭೀಕರ ಹತ್ಯೆಯ ಸತ್ಯ ಹೊರಬಂದಿತು.

ಪೊಲೀಸರನ್ನು ಕಂಡ ತಕ್ಷಣ ರೂಬಿ ಆತಂಕಗೊಂಡಿರುವುದು ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತು. ನಂತರ ನಡೆಸಿದ ಸುದೀರ್ಘ ವಿಚಾರಣೆಯಲ್ಲಿ ಅವರು ಸಂಪೂರ್ಣ ಘಟನೆ ಒಪ್ಪಿಕೊಂಡರು.ಭರತ್‌ಪುರ ಮೂಲದ ಸುರೇಂದ್ರ ಕುಮಾರ್ ಶರ್ಮಾ ಅವರು ಪತ್ನಿ ರೂಬಿ, ತಾಯಿ ಕಮಲಾ ಹಾಗೂ ಇಬ್ಬರು ಪುತ್ರಿಯರೊಂದಿಗೆ ರೇಣುಕಾಧಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು ಎಂದು ಎಸಿಪಿ ಅಮೀಶ್ ತಿಳಿಸಿದ್ದಾರೆ. ಆರಂಭದಿಂದಲೇ ಸುರೇಂದ್ರ ಶರ್ಮಾ ಅವರ ಕಾಣೆಯಾದ ಪ್ರಕರಣದಲ್ಲಿ ರೂಬಿಯ ವರ್ತನೆ ಬಗ್ಗೆ ಮೃತರ ಹಿರಿಯ ಸಹೋದರ ಅನುಮಾನ ವ್ಯಕ್ತಪಡಿಸಿದ್ದರು.

ರೂಬಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಯಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.ಕೊಲೆ ಮಾಡುವ ಮೊದಲು, ಮನೆಯಲ್ಲಿ ಇದ್ದ ಅತ್ತೆ ಹಾಗೂ ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ಬಳಿಕ ಪತಿಯನ್ನು ಬಾತ್‌ರೂಮ್‌ನಲ್ಲೇ ಹೂತು, ಅದೇ ಬಾತ್‌ರೂಮ್ ಅನ್ನು ರೂಬಿ ಪ್ರತಿದಿನ ಬಳಸುತ್ತಿದ್ದರು. ಇದರಿಂದ ಯಾರಿಗೂ ಯಾವುದೇ ಅನುಮಾನ ಮೂಡಲಿಲ್ಲ.
ಜನರು ಸುರೇಂದ್ರ ಬಗ್ಗೆ ಕೇಳಿದಾಗಲೆಲ್ಲಾ ರೂಬಿ ಅಳುವ ನಾಟಕ ಮಾಡುತ್ತಿದ್ದರು. ಸುಮಾರು ಒಂದೂವರೆ ತಿಂಗಳ ಕಾಲ ಈ ನಾಟಕ ಮುಂದುವರಿದ ಕಾರಣ, ಸುರೇಂದ್ರ ಕೊಲೆಯಾಗಿದ್ದಾರೆ ಎಂಬ ಸುಳಿವು ಯಾರಿಗೂ ಸಿಕ್ಕಿರಲಿಲ್ಲ.

ಆದರೆ ಅತ್ತೆಯ ಪಿಂಚಣಿ ವಿಚಾರವಾಗಿ ಸುರೇಂದ್ರ ಅವರ ಸಹೋದರ ಅನಿಲ್ ಶರ್ಮಾ ಅವರೊಂದಿಗೆ ಉಂಟಾದ ವಿವಾದದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!