ಮಂಗಳೂರು: ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಶಿಥಿಲಗೊಂಡಿದ್ದು, ಸಮಗ್ರ ಯೋಜನೆ ಜಾರಿಯಾಗದ ಕಾರಣ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದರು.
ಮನಪಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1952ರಿಂದಲೂ ಸಮಗ್ರ ಒಳಚರಂಡಿ ಯೋಜನೆ ಜಾರಿಗೆ ತರಬೇಕೆಂಬ ಮಾತು ಕೇಳಿಬರುತ್ತಿದ್ದರೂ, ಇಂದಿಗೂ ಅದು ಸಾಕಾರವಾಗಿಲ್ಲ. ಮಳೆಗಾಲದ ಈ ಸಮಯದಲ್ಲಿ ನಗರದ ಅನೇಕ ಪ್ರದೇಶಗಳಲ್ಲಿ ಇನ್ನೂ ಒಳಚರಂಡಿ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಬಾವಿಗಳು ಹಾಗೂ ಕೆರೆಗಳು ಕಲುಷಿತಗೊಳ್ಳುತ್ತಿವೆ. ರಾಜಕಾಲುವೆಗಳಲ್ಲಿಯೂ ಒಳಚರಂಡಿ ನೀರೇ ಹರಿಯುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ನಾಗರಿಕರು ಅಸ್ವಸ್ಥಗೊಂಡಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಸಮಗ್ರ ಯೋಜನೆ ಜಾರಿಯಾಗದೇ, ಸಣ್ಣಪುಟ್ಟ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.
ಕಳೆದ ಹಲವು ವರ್ಷಗಳಿಂದ ಆಡಳಿತದಲ್ಲಿರುವ ಜನಪ್ರತಿನಿಧಿಗಳು ಮಂಗಳೂರಿನ 60 ವಾರ್ಡ್‌ಗಳಿಗೆ ಸಮಗ್ರ ಒಳಚರಂಡಿ ಯೋಜನೆ ಜಾರಿಗೊಳಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ರಾಜಕೀಯ ಆರೋಪ-ಪ್ರತ್ಯಾರೋಪ ಬಿಟ್ಟು ನಾಗರಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವತ್ತ ಸರ್ಕಾರಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ , ಪ್ರಕಾಶ್ ಸಾಲಿಯಾನ್ , ಭಾಸ್ಕರ್ ರಾವ್ , ಮೀನಾ ಸಹಿತ ಮತ್ತಿತರರು ಉಪಸ್ಥಿತರಿದ್ದರು .


