ಉಡುಪಿ: ಸಮಾಜಸೇವೆ ಎಂದರೆ ಕೇವಲ ಆರ್ಥಿಕ ನೆರವು ನೀಡುವುದಲ್ಲ, ತಮ್ಮ ವೃತ್ತಿಯನ್ನೇ ಸೇವೆಯ ಮಾಧ್ಯಮವನ್ನಾಗಿ ಮಾಡಿಕೊಂಡು ಮಾನವೀಯತೆಯನ್ನು ಮೆರೆದರೂ ಅದು ನಿಜವಾದ ಸಮಾಜಸೇವೆಯೇ ಎಂಬುದಕ್ಕೆ ಉಡುಪಿ ಜಿಲ್ಲೆಯ ಕೋಟ ವಲಯ ಸವಿತ ಸಮಾಜ ಮಾದರಿಯಾಗಿದೆ. ಕಳೆದ ಒಂದು ವರ್ಷದಿಂದ ಸಂಘದ ಸದಸ್ಯರು ಸಾಲಿಗ್ರಾಮ ಸಮೀಪದ ತೋಡ್ಕಟ್ಟು ಹೊಸ ಬದುಕು ಆಶ್ರಮಕ್ಕೆ ಪ್ರತಿ ತಿಂಗಳು ಭೇಟಿ ನೀಡಿ ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸುವ ಮೂಲಕ ಆತ್ಮಗೌರವ ಮತ್ತು ಆತ್ಮವಿಶ್ವಾಸ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ.
ತೋಡ್ಕಟ್ಟು ಹೊಸ ಬದುಕು ಆಶ್ರಮವು ಸಮಾಜದಿಂದ ಕಡೆಗಣಿಸಲ್ಪಟ್ಟ ಅನಾಥರು, ನಿರ್ಗತಿಕರು ಹಾಗೂ ಆಶ್ರಯವಿಲ್ಲದವರಿಗೆ ವಸತಿ, ಆಹಾರ, ಚಿಕಿತ್ಸೆ ಮತ್ತು ಆರೈಕೆ ಒದಗಿಸುತ್ತಿದೆ. ವಿವಿಧ ಹಿನ್ನೆಲೆಯಿಂದ ಬಂದ ಆಶ್ರಮವಾಸಿಗಳಿಗೆ ಹೊಸ ಬದುಕು ಕಟ್ಟಿಕೊಡುವ ಉದ್ದೇಶದಿಂದ ಆಶ್ರಮ ಕಾರ್ಯನಿರ್ವಹಿಸುತ್ತಿದೆ.

ಕೋಟ ವಲಯ ಸವಿತ ಸಮಾಜದ ಸದಸ್ಯರು ತಮ್ಮ ವೃತ್ತಿಯನ್ನು ಕೇವಲ ಜೀವನೋಪಾಯಕ್ಕೆ ಸೀಮಿತಗೊಳಿಸದೆ ಸಮಾಜಸೇವೆಯ ರೂಪಕ್ಕೆ ತಂದಿದ್ದಾರೆ. ಆಶ್ರಮಕ್ಕೆ ಪ್ರತಿ ತಿಂಗಳು ತೆರಳಿ ಉಚಿತ ಕ್ಷೌರ ಸೇವೆ ನೀಡುವುದರ ಜೊತೆಗೆ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರ ನೋವು-ನಲಿವು ಆಲಿಸಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಸೇವೆಯ ಬಳಿಕ ಆಶ್ರಮವಾಸಿಗಳ ಮುಖದಲ್ಲಿ ಮೂಡುವ ಮಂದಹಾಸವೇ ತಮ್ಮ ಸೇವೆಗೆ ದೊರೆಯುವ ಬಹುದೊಡ್ಡ ಪ್ರತಿಫಲ ಎಂದು ಸದಸ್ಯರು ಹೇಳುತ್ತಾರೆ.
ಹೊಸ ಬದುಕು ಆಶ್ರಮವನ್ನು ವಿನಯ ಚಂದ್ರ ಹಾಗೂ ರಾಜೇಶ್ವರಿ ದಂಪತಿ ತಮ್ಮ ಸ್ವಂತ ಆದಾಯ ಮತ್ತು ದಾನಿಗಳ ಸಹಕಾರದಿಂದ ನಡೆಸುತ್ತಿದ್ದು, ಆಹಾರ, ಔಷಧಿ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಸಮಾಜದ ಸಹಕಾರ ನಿರಂತರವಾಗಿ ಅಗತ್ಯವಿದೆ. ಸೇವೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿರುವ ಈ ದಂಪತಿಯ ಕಾರ್ಯಕ್ಕೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡುತ್ತಿವೆ.
ಈ ಕುರಿತು ಆಶ್ರಮದ ಸಂಸ್ಥಾಪಕ ವಿನಯ ಚಂದ್ರ ಹಾಗೂ ಸವಿತ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಂಡಾರಿ ಪಡುಕೆರೆ ಮಾತನಾಡಿ, ಯಾವುದೇ ಪ್ರಚಾರ ಅಥವಾ ಪ್ರತಿಫಲದ ನಿರೀಕ್ಷೆಯಿಲ್ಲದೆ ನಡೆಯುತ್ತಿರುವ ಈ ಸೇವೆ ಮಾನವೀಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಣ್ಣದಾದರೂ ಅರ್ಥಪೂರ್ಣ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.


