ಏಣಿಯಿಂದ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು: ಹೆಬ್ರಿಯಲ್ಲಿ ದುರ್ಘಟನೆ

ಉಡುಪಿ: ಹೆಬ್ರಿ ತಾಲೂಕಿನ ಹುತುರ್ಕೆ ಪ್ರದೇಶದಲ್ಲಿ ಏಣಿಯಿಂದ ಆಯತಪ್ಪಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹೆಬ್ರಿ ತಾಲೂಕಿನ ಬೇಳಂಜೆ ನಿವಾಸಿ ಸಾತ್ವಿಕ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಪರೀಕ್ಷೆ ಮುಗಿಸಿದ್ದನು.

ರಜೆಯ ಸಮಯವನ್ನು ಸದುಪಯೋಗಪಡಿಸಿಕೊಂಡು ತನ್ನ ವಿದ್ಯಾಭ್ಯಾಸಕ್ಕೂ ಹಾಗೂ ಮನೆಯ ಖರ್ಚಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹುತುರ್ಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಏಣಿಯಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸಾತ್ವಿಕ್ ಕೇವಲ ವಿದ್ಯಾರ್ಥಿಯಷ್ಟೇ ಅಲ್ಲದೆ, ಮನೆಯ ಆಧಾರಸ್ತಂಭವಾಗಿದ್ದನು. ಕೃಷಿಯ ಮೇಲೂ ಆಸಕ್ತಿ ಹೊಂದಿದ್ದ ಈತ ಮುಂದಿನ ದಿನಗಳಲ್ಲಿ ಪದವಿ ವಿದ್ಯಾಭ್ಯಾಸ ಮುಂದುವರಿಸಲು ಯೋಜನೆ ಮಾಡಿಕೊಂಡಿದ್ದನು. ಅದಕ್ಕಾಗಿ ಹಣ ಸಂಗ್ರಹಿಸಲು ರಜೆಯಲ್ಲಿ ಕೆಲಸಕ್ಕೆ ಹೋಗಿದ್ದನು ಎನ್ನಲಾಗಿದೆ. ಕೆಲಸಕ್ಕೆ ತೆರಳಿದ ಯುವಕ ಮನೆಗೆ ಮರಳಿ ಬಾರದಿರುವುದು ಕುಟುಂಬದವರಲ್ಲಿ ಆಘಾತ ಮೂಡಿಸಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!