ಉಡುಪಿ ಜಿಲ್ಲೆಯಾದ್ಯಂತ ಇಂದು 650ಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಬಂದ್ನಲ್ಲಿ ಭಾಗವಹಿಸಿ, ಆನ್ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ಸೇವೆಗೆ ವಿರೋಧ ವ್ಯಕ್ತಪಡಿಸಿವೆ. ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಸಂಘದ ಪ್ರತಿನಿಧಿಗಳು ಮಾತನಾಡಿ, ಆನ್ಲೈನ್ ಔಷಧ ಮಾರಾಟದಿಂದ ಕಾನೂನುಬಾಹಿರ ಔಷಧ ವ್ಯವಹಾರಗಳಿಗೆ ಅವಕಾಶ ಸಿಗುತ್ತಿದೆ ಎಂದು ಆರೋಪಿಸಿದರು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ನೀಡಲಾಗುತ್ತಿದ್ದು, ಎಐ ಮತ್ತು ಪಿಡಿಎಫ್ ಎಡಿಟರ್ಗಳ ಸಹಾಯದಿಂದ ನಕಲಿ ಪ್ರಿಸ್ಕ್ರಿಪ್ಷನ್ಗಳನ್ನು ಸಿದ್ಧಪಡಿಸಿ ಔಷಧ ಪಡೆಯಲಾಗುತ್ತಿದೆ ಎಂದು ಹೇಳಿದರು.
ವಿಶೇಷವಾಗಿ ಯುವಕರು ನಕಲಿ ಸಹಿಗಳಿರುವ ಪ್ರಿಸ್ಕ್ರಿಪ್ಷನ್ಗಳನ್ನು ಸ್ಕ್ಯಾನ್ ಮಾಡಿ ನಿದ್ರೆ ಮಾತ್ರೆಗಳು ಮತ್ತು ನರ್ಕೋಟಿಕ್ ಔಷಧಿಗಳನ್ನು ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿರುವುದು ಅಪಾಯಕಾರಿಯಾಗಿದೆ. ಇದರಿಂದ ಮಾದಕ ವ್ಯಸನ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಇದೇ ವೇಳೆ, ಔಷಧ ಕಂಪನಿಗಳು ಮೆಡಿಕಲ್ ಅಂಗಡಿಗಳಿಗೆ ಸುಮಾರು 40% ಮಾರ್ಜಿನ್ ನೀಡುತ್ತಿದ್ದರೆ, ಆನ್ಲೈನ್ ಕಂಪನಿಗಳು 50% ರಿಯಾಯಿತಿ ನೀಡುತ್ತಿರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.
“ಇದು ಕೇವಲ ವ್ಯಾಪಾರದ ಹಿತಾಸಕ್ತಿಗಾಗಿ ನಡೆಸುತ್ತಿರುವ ಪ್ರತಿಭಟನೆ ಅಲ್ಲ; ಸಾರ್ವಜನಿಕರ ಸುರಕ್ಷತೆಗಾಗಿ ನಡೆಸುತ್ತಿರುವ ಹೋರಾಟ. ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಇಂದು ವ್ಯವಹಾರ ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ,” ಎಂದು ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.