ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. 2014 ರಲ್ಲಿ ವಿಶ್ವಸಂಸ್ಥೆ ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ‘ಯೋಗ’ ಇಂದು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದು ಭಾರತದ ಕೊಡುಗೆಯನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಸ್ಮರಿಸುತ್ತಿರುವುದು ಭಾರತೀಯರಾದ ನಮಗೆಲ್ಲಾ ಹೆಮ್ಮೆ.

ಭಾರತದ ಪ್ರತಿ ಮೂಲೆ ಮೂಲೆಯಲ್ಲೂ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದೇ ರೀತಿ
ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿಯೂ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇಲ್ಲಿ ಕಲಿಯುತ್ತಿರುವ ಎಲ್ಲಾ 300 ವಿದ್ಯಾರ್ಥಿಗಳು ಈ ಯೋಗ ಸಂಭ್ರಮದಲ್ಲಿ ಭಾಗಿಯಾದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿನೋದ ಎನ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸರಳ ವ್ಯಾಯಾಮ, ಸೂರ್ಯ ನಮಸ್ಕಾರ, ಯೋಗಾಸನದ ಕೆಲವು ಭಂಗಿಗಳನ್ನು ಮಾಡಿ ತೋರಿಸಿದರು.

ಯೋಗ ಶಿಕ್ಷಣವನ್ನು ಪಡೆದಿರುವ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ಇವರು ಯೋಗ ದಿನಾಚರಣೆ ಕುರಿತು ಮಾತನಾಡಿ, “ಯೋಗ ಎಂದರೆ ದೇಹ, ಮನಸ್ಸು ಮತ್ತು ಆತ್ಮದ ಏಕತೆಯ ವಿಜ್ಞಾನ. ಯೋಗದಿಂದ ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ – ಇವೆಲ್ಲ ಯೋಗದ ಪ್ರಮುಖ ಭಾಗಗಳು. ಯೋಗವನ್ನು ನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಂಡಾಗ ಆರೋಗ್ಯಕರ ಜೀವನವನ್ನು ಸಂಪಾದಿಸಬಹುದು” ಎಂದರು.

ಯೋಗ ದಿನಾಚರಣೆಯ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ, ವಿಶ್ವನಾಥ ಶೆಟ್ಟಿ ಪೆರ್ಲದಬೈಲು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!