ಸುಬ್ರಹ್ಮಣ್ಯ, : ಸರಣಿ ರಜೆಗಳ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ 40 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಶುಕ್ರವಾರದ ರಜೆ, ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆ ಒಂದೇ ಸಂದರ್ಭದಲ್ಲಿ ಬಂದಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಶುಕ್ರವಾರದಿಂದಲೇ ಕ್ಷೇತ್ರಕ್ಕೆ ಆಗಮಿಸಲು ಆರಂಭಿಸಿದ್ದರು. ಪರಿಣಾಮವಾಗಿ ದೇವಸ್ಥಾನದ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದು, ಖಾಸಗಿ ಲಾಡ್ಜ್‌ಗಳಲ್ಲೂ ಕೊಠಡಿಗಳು ಸಂಪೂರ್ಣ ಭರ್ತಿಯಾಗಿದ್ದವು. ಕೊಠಡಿ ಸಿಗದ ಅನೇಕ ಭಕ್ತರು ದೇವಸ್ಥಾನದ ರಥಬೀದಿ ಸಭಾಂಗಣ ಹಾಗೂ ಛತ್ರಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಮಾಡಿಕೊಂಡರು.

ದೇವಸ್ಥಾನದ ಸುತ್ತಮುತ್ತ ಹಾಗೂ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ಪಾರ್ಕಿಂಗ್ ಪ್ರದೇಶಗಳು ವಾಹನಗಳಿಂದ ಕಿಕ್ಕಿರಿದು ತುಂಬಿದ್ದವು. ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆಯ ಬದಿಗಳಲ್ಲಿಯೂ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕುಮಾರಧಾರ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಸರತಿ ಸಾಲಿನಲ್ಲಿ ನಿಂತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಬಳಿಕ ದೇವಳದಲ್ಲಿ ತೀರ್ಥಪ್ರಸಾದ ಸ್ವೀಕರಿಸಿದರು.

ನಿರಂತರ ಅನ್ನದಾನ ಸೇವೆ
ಭಕ್ತರ ಹೆಚ್ಚಿನ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನದಲ್ಲಿ ನಿರಂತರ ಅನ್ನದಾನ ಸೇವೆ ನಡೆಸಲಾಯಿತು. ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಬೆಳಿಗ್ಗೆ 10.30ರಿಂದ ಸಂಜೆ 4 ಗಂಟೆಯವರೆಗೆ ನಿರಂತರವಾಗಿ ಅನ್ನದಾನ ನಡೆಯಿತು. ಅನ್ನದಾನದಲ್ಲಿ ಅನ್ನ, ಸಾಂಬಾರ್, ಸಾರು, ಪಲ್ಯ, ಚಟ್ನಿ, ಪಾಯಸ ಹಾಗೂ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಯಿತು.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಳದ ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ಸುಗಮ ದರ್ಶನ, ಅನ್ನದಾನ ಹಾಗೂ ವಾಹನಗಳ ಸುಸೂತ್ರ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

