ಮಂಗಳೂರು, ಜೂ. 29: ಮುಂಬೈಯಲ್ಲಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಕೇರಳಕ್ಕೆ ಹಿಂದಿರುಗುತ್ತಿದ್ದ ಉದ್ಯಮಿಯೊಬ್ಬರ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ, ಅವರ ಪತ್ನಿ ಹಾಗೂ ಮಗನನ್ನು ಕಾರಿನ ಸಮೇತ ಅಪಹರಿಸಿ ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಕಾರನ್ನು ದೋಚಿದ ಘಟನೆ ಸೋಮವಾರ ಮುಂಜಾನೆ ಬೈಕಂಪಾಡಿ ಸಮೀಪದ ದ್ವಾರ ಹೋಟೆಲ್ ಬಳಿ ನಡೆದಿದೆ.


ಕೇರಳದ ಪಯ್ಯನ್ನೂರು ನಿವಾಸಿ ಹಾಗೂ ಉದ್ಯಮಿ ವಿಕಾಸ್ ಅವರು ಪತ್ನಿ ಮತ್ತು ಮಗನೊಂದಿಗೆ ಕಾರಿನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮುಂಜಾನೆ ಸುಮಾರು 2.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರ ಹೋಟೆಲ್ ಸಮೀಪ ತಲುಪುತ್ತಿದ್ದಾಗ, ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ 7ರಿಂದ 8 ಮಂದಿ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ ಬಲವಂತವಾಗಿ ನಿಲ್ಲಿಸಿದ್ದಾರೆ.
ಬಳಿಕ ಉದ್ಯಮಿ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ಆರೋಪಿಗಳು, ಅವರ ಪತ್ನಿ ಮತ್ತು ಮಗನನ್ನು ಕಾರಿನ ಸಮೇತ ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಪಣಂಬೂರು ಬೀಚ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಳು, ವಿಕಾಸ್ ಅವರ ಪತ್ನಿ ಹಾಗೂ ಮಗನಿಗೆ ಬೆದರಿಕೆ ಹಾಕಿ ಅವರ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಬಳಿಕ ತಾಯಿ ಮತ್ತು ಮಗನನ್ನು ರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಉದ್ಯಮಿ ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.


