ಮಂಗಳೂರು: ರಾಜ್ಯದಲ್ಲೇ ಅತ್ಯಧಿಕ ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಜೂನ್ ತಿಂಗಳಲ್ಲೇ ಶೇ.50ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗದಿರುವುದು, ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದು ಹಾಗೂ ಮೀನುಗಾರಿಕೆ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಜೂನ್ 28ರವರೆಗೆ ಕಳೆದ ವರ್ಷ 1,080.5 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಕೇವಲ 494.8 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಬಂಟ್ವಾಳದಲ್ಲಿ ನದಿಯ ನೀರಿನ ಮಟ್ಟ 4.47 ಮೀಟರ್ ಇದ್ದು, ಇದು ಅಪಾಯದ ಮಟ್ಟವಾದ 9 ಮೀಟರ್ಗಿಂತ ಬಹಳ ಕಡಿಮೆಯಾಗಿದೆ.
ಮಳೆ ಕೊರತೆಯ ನಡುವೆಯೂ ರೈತರು ಭತ್ತದ ಬಿತ್ತನೆ ಆರಂಭಿಸಿದ್ದು, ಜಿಲ್ಲೆಯಲ್ಲಿ ಇದುವರೆಗೆ 164 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 232 ಹೆಕ್ಟೇರ್ನಲ್ಲಿ ಬಿತ್ತನೆ ನಡೆದಿತ್ತು. ಈ ವರ್ಷ ಜಿಲ್ಲೆಯಲ್ಲಿ 9,750 ಹೆಕ್ಟೇರ್ ಭತ್ತದ ಬೇಸಾಯ ಗುರಿ ಹೊಂದಲಾಗಿದೆ.
ಮಳೆ ಅಭಾವದಿಂದ ಭತ್ತದ ಕೃಷಿಗೆ ಹಿನ್ನಡೆಯಾಗಿದ್ದರೂ, ರಂಬುಟಾನ್ ಬೆಳೆಗಾರರಿಗೆ ಅನುಕೂಲವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ ಬಾರಿ ಉತ್ತಮ ಫಸಲು ದೊರೆಯುತ್ತಿದೆ.

ಇನ್ನೊಂದೆಡೆ, ಮುಂಗಾರು ದುರ್ಬಲಗೊಂಡಿರುವುದು ಕರಾವಳಿಯ ಮೀನುಗಾರಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸಮುದ್ರಕ್ಕೆ ಸಿಹಿನೀರಿನ ಹರಿವು ಕಡಿಮೆಯಾಗುವುದರಿಂದ ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ನಿನೊ ಪರಿಣಾಮದಿಂದ ಸಮುದ್ರದ ನೀರಿನ ಉಷ್ಣಾಂಶ ಹೆಚ್ಚಾಗಿರುವುದೂ ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಎಚ್.ಎನ್. ಆಂಜನೇಯಪ್ಪ ತಿಳಿಸಿದ್ದಾರೆ.


