ಇಂದಿನಿಂದ ರಾಜ್ಯಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ಬೆಂಗಳೂರು: ರಾಜ್ಯಾದ್ಯಂತ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಂಡಿದೆ. ಈ ಪ್ರಕ್ರಿಯೆಯಡಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳ ಪರಿಶೀಲನೆ ನಡೆಸಲಿದ್ದಾರೆ.

ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ, ಈಗಾಗಲೇ ಮತದಾರರ ಗುರುತಿನ ಚೀಟಿ (EPIC) ಹೊಂದಿರುವವರು ಅಥವಾ ಆಧಾರ್ ಕಾರ್ಡ್ ಹೊಂದಿರುವವರು ಅಗತ್ಯ ವಿವರಗಳನ್ನು ಪರಿಶೀಲಿಸಿ ನಮೂನೆಗಳನ್ನು ಭರ್ತಿ ಮಾಡಬೇಕು. 2002ರ ನಂತರ ಜನಿಸಿದ ಮತದಾರರು ತಮ್ಮ ಜನ್ಮದಿನಾಂಕ ಹಾಗೂ ಅರ್ಹತೆಯನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಪ್ರತಿ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ಅರ್ಹ ಮತದಾರರಿಗೆ ನಮೂನೆಗಳನ್ನು ವಿತರಿಸಲಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಬಿಎಲ್‌ಒಗಳಿಗೆ ನೇರವಾಗಿ ನೀಡಬಹುದಾಗಿದ್ದು, ಚುನಾವಣಾ ಅಧಿಕಾರಿಗಳ ಕಚೇರಿಗೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮತದಾರರು ಇತ್ತೀಚಿನ ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅಲ್ಲದೆ, ವಿಳಾಸ ಬದಲಾವಣೆ ಅಥವಾ ಇತರ ಮಾಹಿತಿಯಲ್ಲಿ ತಿದ್ದುಪಡಿ ಇದ್ದಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯನ್ನು ನವೀಕರಿಸಿಕೊಳ್ಳುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ.

ಯಾವುದೇ ಅರ್ಹ ನಾಗರಿಕ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಸಾರ್ವಜನಿಕರು ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!