ಬಂಟ್ವಾಳ, ಜು. 7: ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ–ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಮಾಣಿ ಸಮೀಪ ಮಾಣಿ–ಮೈಸೂರು ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಪರಿಣಾಮ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹಾಗೂ ವಿವಿಧ ಕೆಲಸಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.

ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಾಹನಗಳನ್ನು ಕೊಡಾಜೆ ಗಡಿ–ಬೊಲ್ಲುಕಲ್ಲು ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಪರ್ಯಾಯ ಮಾರ್ಗದಲ್ಲಿ ಸಂಚರಿಸಲಾಯಿತು.
ಬಳಿಕ ಸಂಬಂಧಿತ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಮರ ತೆರವುಗೊಂಡ ನಂತರ ರಸ್ತೆ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.
ಭಾರೀ ಗಾಳಿ–ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


