ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಬೆಂಬಲ: ಇದು ರಾಜ್ಯದ ಹೆಮ್ಮೆಯ ಕ್ರೀಡೆ – ದೇವಿಪ್ರಸಾದ್ ಶೆಟ್ಟಿ

ಉಡುಪಿ:ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಆಯೋಜನೆಗೆ ವ್ಯಕ್ತವಾಗಿರುವ ವಿರೋಧದ ನಡುವೆ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕಂಬಳದ ಪರವಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದು, “ದಸರಾ ರಾಜ್ಯದ ನಾಡಹಬ್ಬ. ಅಂತಹ ನಾಡಹಬ್ಬದಲ್ಲಿ ಕಂಬಳ ಆಯೋಜಿಸಿದರೆ ತಪ್ಪೇನಿಲ್ಲ. ಇದು ರಾಜ್ಯದ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಸಾಂಪ್ರದಾಯಿಕ ಕ್ರೀಡೆ” ಎಂದು ಹೇಳಿದ್ದಾರೆ.

ಕರಾವಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳಕ್ಕೆ ರಾಜ್ಯ ಸರ್ಕಾರ ಈಗಾಗಲೇ ಅಧಿಕೃತ ಕ್ರೀಡೆಯ ಮಾನ್ಯತೆ ನೀಡಿದ್ದು, ರಾಜ್ಯ ಕಂಬಳ ಅಸೋಸಿಯೇಷನ್ ಕೂಡ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ನಡೆಸಬಹುದು ಎಂದು ಉಚ್ಚ ನ್ಯಾಯಾಲಯವೂ ತೀರ್ಪು ನೀಡಿದೆ ಎಂದು ತಿಳಿಸಿದರು.

ಕಂಬಳ ಕೇವಲ ದಕ್ಷಿಣ ಕನ್ನಡ, ಉಡುಪಿ ಅಥವಾ ಕಾಸರಗೋಡಿಗೆ ಸೀಮಿತವಾಗಿಲ್ಲ. ಇದು ಯಾವುದೇ ವ್ಯಕ್ತಿ, ಪಕ್ಷ, ಜಾತಿ ಅಥವಾ ಧರ್ಮಕ್ಕೆ ಸೀಮಿತವಾದ ಕ್ರೀಡೆಯಲ್ಲ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರೂ ಕಂಬಳದ ಕೋಣಗಳನ್ನು ಸಾಕುತ್ತಿದ್ದು, ಬಡವರು-ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುವ ಸಾಮರಸ್ಯದ ಕ್ರೀಡೆಯಾಗಿದೆ ಎಂದು ಹೇಳಿದರು.

ಮೈಸೂರು ಅರಸರ ಕಾಲದಿಂದಲೂ ಕಂಬಳಕ್ಕೆ ಪ್ರೋತ್ಸಾಹ ದೊರೆಯುತ್ತಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಂಬಳಕ್ಕೆ ವಿಶೇಷ ಸಹಕಾರ ನೀಡಿದ್ದರು. ಬಾರ್ಕೂರು ಸಂಸ್ಥಾನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅರಮನೆ ಆಶ್ರಯದಲ್ಲಿ ಕಂಬಳ ನಡೆಯುತ್ತಿತ್ತು. ಹೀಗಾಗಿ ಮೈಸೂರು ಮತ್ತು ಕರಾವಳಿಯ ಸಂಪ್ರದಾಯಗಳ ನಡುವೆ ಯಾವುದೇ ವಿರೋಧಾಭಾಸವಿಲ್ಲ ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಕಂಬಳಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಯುವಕರು, ಉದ್ಯಮಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಕಂಬಳದಿಂದ ಯಾವುದೇ ವರ್ಗದವರ ಶೋಷಣೆ ನಡೆಯುತ್ತದೆ ಎಂಬ ಆರೋಪಗಳು ಆಧಾರರಹಿತವಾಗಿದ್ದು, ಇದು ರೈತರ ಹಾಗೂ ಎಲ್ಲಾ ವರ್ಗದ ಜನರ ಕ್ರೀಡೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಕಂಬಳದ ಕೋಣಗಳನ್ನು ಮಗುವಿಗಿಂತಲೂ ಹೆಚ್ಚಿನ ಪ್ರೀತಿ ಮತ್ತು ಕಾಳಜಿಯಿಂದ ಸಾಕಲಾಗುತ್ತದೆ. ವರ್ಷದಲ್ಲಿ ಕೇವಲ 90 ದಿನಗಳಷ್ಟೇ ಸ್ಪರ್ಧೆಯಲ್ಲಿ ಓಡಿಸಲಾಗುತ್ತಿದ್ದು, ಉಳಿದ ದಿನಗಳಲ್ಲಿ ಅವುಗಳ ಪಾಲನೆ-ಪೋಷಣೆಗೆ ವಿಶೇಷ ಗಮನ ನೀಡಲಾಗುತ್ತದೆ. ಕಂಬಳದಲ್ಲಿ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ಅಥವಾ ಶೋಷಣೆಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.

ಕಂಬಳ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದ ಕ್ರೀಡೆಯಾಗಿದ್ದು, ಇಲ್ಲಿನ ಓಟದ ವೇಗ ವಿಶ್ವಮಟ್ಟದ ಸಾಧನೆಗಳಿಗೆ ಹೋಲಿಕೆಯಾಗುವಂತಿದೆ. ಪರಿಸರಕ್ಕೂ ಯಾವುದೇ ಹಾನಿಯಾಗದ ಈ ಕ್ರೀಡೆಗೆ ಹೆಚ್ಚಿನ ವೆಚ್ಚ ಅಥವಾ ಭಾರಿ ಸಿದ್ಧತೆ ಅಗತ್ಯವಿಲ್ಲ. ಸರ್ಕಾರಕ್ಕೆ ಅಗತ್ಯವಿದ್ದರೆ ದಾನಿಗಳ ಸಹಕಾರದಲ್ಲಿಯೂ ಕಂಬಳ ಆಯೋಜಿಸಲು ನಾವು ಸಿದ್ಧ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಮೊದಲು ಕಂಬಳದ ಇತಿಹಾಸ, ಸಂಪ್ರದಾಯ ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳಬೇಕು. ನಾವು ಮಂಗಳೂರು ದಸರೆಯಲ್ಲಿ ಕುಸ್ತಿ ಸೇರಿದಂತೆ ಇತರ ಭಾಗಗಳ ಕಲೆಗಳನ್ನು ಸ್ವಾಗತಿಸುತ್ತೇವೆ. ಅದೇ ರೀತಿ ಮೈಸೂರು ದಸರೆಯಲ್ಲಿ ಕಂಬಳಕ್ಕೂ ಅವಕಾಶ ನೀಡಬೇಕು. ಇದು ಇಡೀ ಕರ್ನಾಟಕದ ವೀರಸಾಹಸ ಮತ್ತು ಸಾಂಸ್ಕೃತಿಕ ಕ್ರೀಡೆಯಾಗಿದೆ ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!