ವಾರಾಹಿ ಪೈಪ್‌ಲೈನ್ ಕಾಮಗಾರಿ ನಿರ್ಲಕ್ಷ್ಯ: ಆರೂರಿನಲ್ಲಿ ನದಿ ಪಾಲಾಗುತ್ತಿರುವ ಕೃಷಿಭೂಮಿ, ರೈತರ ಆತಂಕ

ಉಡುಪಿ: ಉಡುಪಿ ಜಿಲ್ಲೆಯ ಆರೂರು ಗ್ರಾಮದಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಬಳಿಕ ನದಿಯಲ್ಲಿ ಹಾಕಿದ್ದ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸದ ಕಾರಣ ನದಿಯ ಹರಿವಿನ ದಿಕ್ಕು ಬದಲಾಗಿದ್ದು, ಕೃಷಿಭೂಮಿಗಳು ನದಿ ಪಾಲಾಗುತ್ತಿರುವ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ.

ಆರೂರು ಗ್ರಾಮದ ತೆಂಕಬೆಟ್ಟು ಸೇತುವೆ ಸಮೀಪ ಹರಿಯುವ ಮಡಿಸಾಲು ಹೊಳೆಯಲ್ಲಿ ವಾರಾಹಿಯಿಂದ ಮಣಿಪಾಲಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಅಳವಡಿಸುವ ವೇಳೆ ನದಿಗೆ ಅಡ್ಡಲಾಗಿ ಮಣ್ಣು ಮತ್ತು ಕಲ್ಲುಗಳನ್ನು ಹಾಕಲಾಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಅವುಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನೀರಿನ ಸಹಜ ಹರಿವು ಬದಲಾಗಿದ್ದು, ಪ್ರವಾಹದ ನೀರು ಕೃಷಿಭೂಮಿಯತ್ತ ಹರಿಯುತ್ತಿದೆ.

ಕಳೆದ ಮಳೆಗಾಲದಲ್ಲೇ ಹಲವು ಎಕರೆ ಭತ್ತದ ಗದ್ದೆಗಳು ನದಿಗೆ ಕೊಚ್ಚಿಹೋಗಿದ್ದು, ತರಕಾರಿ ಬೆಳೆಗಳು, ಪಂಪ್‌ಹೌಸ್ ಸೇರಿದಂತೆ ಅನೇಕ ಮರಗಳು ಹಾನಿಗೊಳಗಾಗಿವೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಈ ವರ್ಷವೂ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಇದೇ ಪರಿಸ್ಥಿತಿ ಎದುರಾಗುವ ಭೀತಿ ರೈತರನ್ನು ಕಾಡುತ್ತಿದೆ. ಸಮಸ್ಯೆಯನ್ನು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನದಿಯಲ್ಲಿ ಸಂಗ್ರಹವಾಗಿರುವ ಮಣ್ಣು ಹಾಗೂ ಕಲ್ಲುಗಳನ್ನು ಕೂಡಲೇ ತೆರವುಗೊಳಿಸಿ, ನದಿ ದಡಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವ ಮೂಲಕ ಕೃಷಿಭೂಮಿಯನ್ನು ರಕ್ಷಿಸಬೇಕು ಎಂದು ರೈತರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಮಗಾರಿ ಬಳಿಕ ನಿರ್ಲಕ್ಷ್ಯದಿಂದ ಉಳಿದಿರುವ ಮಣ್ಣಿನ ರಾಶಿಯೇ ಇಂದು ರೈತರ ಜೀವನೋಪಾಯಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!