ಮತದಾರರ ಪಟ್ಟಿ ಪರಿಷ್ಕರಣೆ ಅವ್ಯವಸ್ಥೆ ಆರೋಪ: ಐವನ್ ಡಿ’ಸೋಜಾ ನೇತೃತ್ವದಲ್ಲಿ ಡಿಸಿಗೆ ಮನವಿ

ಮಂಗಳೂರು, ಜು. 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎನ್ಯುಮರೇಷನ್ ಪ್ರಕ್ರಿಯೆಯಲ್ಲಿ ಅಕ್ರಮಗಳು ಮತ್ತು ಅವ್ಯವಸ್ಥೆಗಳು ನಡೆಯುತ್ತಿವೆ ಎಂದು ಆರೋಪಿಸಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗವು ಶುಕ್ರವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ, ಜಿಲ್ಲೆಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲು ಕಾಂಗ್ರೆಸ್ ಪಕ್ಷವು 1,750ಕ್ಕೂ ಅಧಿಕ ಬೂತ್ ಮಟ್ಟದ ಏಜೆಂಟರನ್ನು (ಬಿ.ಎಲ್.ಎ.) ನೇಮಿಸಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಜಿಲ್ಲಾಡಳಿತವು ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನಿಸುತ್ತಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘನೆ ಮತ್ತು ಪ್ರಕ್ರಿಯೆಯ ದುರುಪಯೋಗ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಆರೋಪಿಸಿದರು.

ಹಳೆಯ ಮತದಾರರ ಪಟ್ಟಿಯಲ್ಲಿರುವ, ಪ್ರಸ್ತುತ ಆ ವಿಳಾಸದಲ್ಲಿ ವಾಸವಿಲ್ಲದವರು ಅಥವಾ ಮನೆ ಮಾರಾಟ ಮಾಡಿ ಸ್ಥಳಾಂತರಗೊಂಡಿರುವವರ ಎನ್ಯುಮರೇಷನ್ ಫಾರಂಗಳನ್ನು ಅಕ್ರಮವಾಗಿ ಸಕ್ರಮಗೊಳಿಸಲು ಕೆಲ ರಾಜಕೀಯ ವ್ಯಕ್ತಿಗಳು ಬಿ.ಎಲ್.ಒ.ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದರು. ಕೆಲವು ಪ್ರದೇಶಗಳಲ್ಲಿ ಮನೆಗಳು ನೆಲಸಮವಾಗಿದ್ದರೂ, ಹಳೆಯ ದಾಖಲೆಗಳನ್ನು ಆಧರಿಸಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.

ಇದಲ್ಲದೆ, ಹಲವೆಡೆ ಬಿ.ಎಲ್.ಒ.ಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಬದಲು ಕೇವಲ ಫಾರಂಗಳನ್ನು ವಿತರಿಸಿ, ಮತದಾರರೇ ಅವುಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಫಾರಂ ಭರ್ತಿ ಮಾಡುವ ವಿಧಾನ ತಿಳಿಯದ ಅನೇಕ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೆಲವು ಕಡೆಗಳಲ್ಲಿ ಬಿ.ಎಲ್.ಒ.ಗಳ ಬದಲಾಗಿ ರಾಜಕೀಯ ಪಕ್ಷಗಳ ಏಜೆಂಟರ ಮೂಲಕ ಫಾರಂಗಳನ್ನು ವಿತರಿಸಲಾಗುತ್ತಿದ್ದು, ಮನೆಯಲ್ಲಿ ಇಲ್ಲದ ಮತದಾರರಿಗೆ ಫಾರಂ ನೀಡದೆ ಹಿಂದಿರುಗುತ್ತಿರುವ ಘಟನೆಗಳೂ ವರದಿಯಾಗಿವೆ. ನಿಯಮಾನುಸಾರ ಬಿ.ಎಲ್.ಒ.ಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಅಗತ್ಯ ನೆರವು ನೀಡಬೇಕು ಹಾಗೂ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಕೆಲವು ದೂರುಗಳು ತಮ್ಮ ಗಮನಕ್ಕೂ ಬಂದಿದ್ದು, ಮತದಾರರ ಸಹಿ ಇಲ್ಲದೆ ಫಾರಂಗಳನ್ನು ಸಲ್ಲಿಸಿರುವ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ಅರ್ಹ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಬಿ.ಎಲ್.ಒ.ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಐವನ್ ಡಿ’ಸೋಜಾ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ ಮತ್ತು ಭಾಸ್ಕರ್ ಮೊಯ್ಲಿ, ಮಾಜಿ ಉಪಮೇಯರ್ ಶೇಷಮ್ಮ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿ’ಸೋಜಾ, ಕೇಶವ ಮರೋಳಿ, ಚೇತನ್ ಕುಮಾರ್, ಭಾಸ್ಕರ್ ರಾವ್, ಅಪ್ಪಿ ಎಸ್., ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್ ಹಾಗೂ ಕಾಂಗ್ರೆಸ್ ಮುಖಂಡರಾದ ಹಬೀಬುಲ್ಲಾ ಕಣ್ಣೂರು, ಪ್ರತಿಭಾ ಮತ್ತು ರವಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!