ಕೊರೊನಾ ಬಗ್ಗೆ ಆತಂಕ ಬೇಡ, ಎಚ್ಚರಿಕೆ ಅಗತ್ಯ: ಸಚಿವ ಯು.ಟಿ. ಖಾದರ್

ಉಡುಪಿ: ದೇಶದಲ್ಲಿ ಮತ್ತೆ ಕೋವಿಡ್‌-19 ಸೋಂಕಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಪರೀಕ್ಷೆ ನಡೆಸಿದಾಗ ಕೆಲವರಲ್ಲಿ ಸೋಂಕು ದೃಢಪಟ್ಟರೂ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.


ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್‌ಗಳು ಪರಿಸರದಲ್ಲಿ ಇರುವುದು ಸಹಜ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವೈರಸ್‌ಗಿಂತ ನಾವು ಗಟ್ಟಿಯಾಗಬೇಕು. ಉತ್ತಮ ಆಹಾರ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಡೆಂಗ್ಯೂ, ಎಚ್‌1ಎನ್‌1 ಹಾಗೂ ಕೋವಿಡ್‌ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮತ್ತು ಸ್ಕ್ರೀನಿಂಗ್ ವ್ಯವಸ್ಥೆ ಮುಂದುವರಿದಿದೆ. ಸೊಳ್ಳೆಗಳ ಉತ್ಪತ್ತಿ ತಡೆಯುವಲ್ಲಿ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಸಹಕರಿಸಬೇಕು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪ್ರಸ್ತುತ ವೈರಲ್ ಜ್ವರಗಳ ಕಾಲವಾಗಿದ್ದು, ಜ್ವರ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಬಿಸಿ ನೀರು ಕುಡಿಯುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಖಾದರ್ ತಿಳಿಸಿದರು.

ಡೆಂಗ್ಯೂ ಲಸಿಕೆ ಕುರಿತು ಪರಿಶೀಲನೆ
ಡೆಂಗ್ಯೂ ಲಸಿಕೆ ಕುರಿತ ಸಂಶೋಧನೆ ಬಗ್ಗೆ ಮಾಹಿತಿ ಬಂದಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಲಸಿಕೆಯ ಪರಿಣಾಮಕಾರಿತ್ವ ಹಾಗೂ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಎಚ್‌ಪಿವಿ ಲಸಿಕೆ ಕಡ್ಡಾಯವಲ್ಲ
ಬಾಲಕಿಯರಿಗೆ ನೀಡಲಾಗುತ್ತಿರುವ ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ ಅದನ್ನು ಶೇ.100ರಷ್ಟು ಕಡ್ಡಾಯಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಜನಜಾಗೃತಿ ಮೂಡಿಸುವ ಮೂಲಕ ಮಾಹಿತಿ ನೀಡಲಾಗುವುದು. ಅಂತಿಮವಾಗಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪೋಷಕರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!