ಕೆರೆಗೆ ಕ್ರಿಮಿನಾಶಕ ಬೆರೆಸಿ ಮೀನುಗಳ ಮಾರಣಹೋಮ, ಸಂತ್ರಸ್ತ ರೈತನಿಂದ ಪರಿಹಾರಕ್ಕೆ ಆಗ್ರಹ

ಹುಣಸೂರು: ಬೀರತಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತ ರೈತ ಶಿವಣ್ಣ ಅವರು ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.

ಬೀರತಮ್ಮನಹಳ್ಳಿಯ ಶಿವಣ್ಣ ಅವರು ತಮ್ಮ ಪುತ್ರನ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯಿಂದ ಕೆರೆಯಲ್ಲಿ ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದರು. ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕಣೆ ಮಾಡಿದ್ದರು. ಇತ್ತೀಚೆಗೆ ಕೆರೆಯಲ್ಲಿ ನೀರು ಕಡಿಮೆಯಾದಾಗ ಮೀನು ಹಿಡಿಯಲು ಹೋದಾಗ ಈ ಅನಾಹುತ ಬೆಳಕಿಗೆ ಬಂದಿದೆ.
3 ದಿನಗಳ ಹಿಂದೆ ಕಿಡಿಗೇಡಿಗಳು ಕೆರೆಗೆ ಕಳೆನಾಶಕ ಅಥವಾ ಕ್ರಿಮಿನಾಶಕ ಬೆರೆಸಿದ್ದರಿಂದ ಮೀನುಗಳು ಸಾಮೂಹಿಕವಾಗಿ ಮೃತಪಟ್ಟಿವೆ. ಮೀನು ಸಾಕಣೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಇನ್‌ಸ್ಪೆಕ್ಟರ್ ಸಂತೋಷ್‌ ಕಶ್ಯಪ್, ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ದೂರು ಬಂದಿದೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಕೆರೆಯ ಸುತ್ತಮುತ್ತಲ ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕವು ಕೆರೆ ನೀರಿಗೆ ಸೇರಿ ಮೀನುಗಳು ಅಸ್ವಸ್ಥಗೊಂಡು ಮೃತಪಟ್ಟಿವೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!