ಪುತ್ತೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ: ಹಕೀಂ ಕೂರ್ನಡ್ಕ ವಿರುದ್ಧ ಪ್ರತಿಭಟನೆ

ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಕಾರ್ಯಕರ್ತರೇ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಶಾಸಕ ಅಶೋಕ್ ರೈ ಅವರ ವಿರುದ್ಧ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲು ಹಕೀಂ ಕೂರ್ನಡ್ಕ ಅವರು ಪುತ್ತೂರು ಪ್ರೆಸ್ ಕ್ಲಬ್‌ಗೆ ಆಗಮಿಸಿ ಪತ್ರಿಕಾಗೋಷ್ಠಿಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶಾಸಕರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾಭವನದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು ಭದ್ರತೆ ಒದಗಿಸಿದ್ದು, ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಪ್ರತಿಭಟನೆ ಹಾಗೂ ಆಕ್ರೋಶದ ನಡುವೆಯೇ ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಮುಗಿಯುವ ವೇಳೆಗೆ ನೂರಾರು ಮಂದಿ ಕಾರ್ಯಕರ್ತರು ಪತ್ರಿಕಾಭವನದ ಬಳಿ ಜಮಾಯಿಸಿದ್ದರು.

ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ, ಹಕೀಂ ಕೂರ್ನಡ್ಕ ಅವರನ್ನು ಪೊಲೀಸ್ ಜೀಪಿನಲ್ಲಿ ಭದ್ರತೆಯೊಂದಿಗೆ ಸ್ಥಳದಿಂದ ಕರೆದೊಯ್ದರು. ಘಟನೆ ಹಿನ್ನೆಲೆಯಲ್ಲಿ ಪುತ್ತೂರು ಪ್ರೆಸ್ ಕ್ಲಬ್ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!