ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉಡುಪಿಯಲ್ಲಿ ಪರಾಕಾಷ್ಠೆ ತಲುಪಿದ್ದು, ಶನಿವಾರ ರಥಬೀದಿಯಲ್ಲಿ ನಡೆಯಲಿರುವ ವಿಟ್ಲಪಿಂಡಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ನಗರದಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದ್ದು, ವಿವಿಧ ಬಗೆಯ ವೇಷಧಾರಿಗಳು ಜನರನ್ನು ರಂಜಿಸುತ್ತಿದ್ದಾರೆ.

ಹುಲಿವೇಷ, ರಾಕ್ಷಸ ವೇಷ ಸೇರಿದಂತೆ ವೈವಿಧ್ಯಮಯ ವೇಷಧಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದು, ಅವರ ಕುಣಿತ, ಮೆರವಣಿಗೆ ಹಾಗೂ ಕಲರವ ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ವೇಷಧಾರಿಗಳ ಆಕರ್ಷಕ ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿದ್ದಾರೆ.

ಈ ನಡುವೆ ವಿಶಿಷ್ಟ ಕೋಳಿ ವೇಷಧಾರಿಗಳ ತಂಡಗಳು ಕೂಡ ನಗರಕ್ಕೆ ಆಗಮಿಸಿದ್ದು, ತಮ್ಮ ವಿನೂತನ ಪ್ರದರ್ಶನದ ಮೂಲಕ ಜನರ ಗಮನ ಸೆಳೆಯುತ್ತಿವೆ. ಕೋಳಿಗಳಂತೆ ವೇಷ ಧರಿಸಿ, ಅವುಗಳ ನಡಿಗೆ, ಓಡಾಟ ಹಾಗೂ ಕೂಗನ್ನು ಅನುಕರಿಸುತ್ತಿರುವ ವೇಷಧಾರಿಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.

ವೇಷಧಾರಿಗಳ ಚೇಷ್ಟೆ ಹಾಗೂ ವಿಶಿಷ್ಟ ಕುಣಿತಕ್ಕೆ ಮಕ್ಕಳು ಸೇರಿದಂತೆ ಸಾರ್ವಜನಿಕರು ಫಿದಾ ಆಗಿದ್ದು, ಉಡುಪಿ ನಗರ ಕೃಷ್ಣಾಷ್ಟಮಿ ಸಂಭ್ರಮದಲ್ಲಿ ಸಂಪೂರ್ಣವಾಗಿ ಮಿಂದೇಳುತ್ತಿದೆ. ವಿಟ್ಲಪಿಂಡಿ ಉತ್ಸವದ ಹಿನ್ನೆಲೆಯಲ್ಲಿ ರಥಬೀದಿ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಸಂಚಾರ ಹೆಚ್ಚಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

