ಕೂಳೂರು–ಬೈಕಂಪಾಡಿ ರಸ್ತೆ ಅವ್ಯವಸ್ಥೆ: ಅಧಿಕಾರಿಗಳ ವಿರುದ್ಧ ಸಂತೋಷ್ ಕೊಲ್ಯ ಆಕ್ರೋಶ

ಮಂಗಳೂರು: ಕೂಳೂರು ಜಂಕ್ಷನ್‌ನಿಂದ ಬೈಕಂಪಾಡಿ ಹಾಗೂ ಸುರತ್ಕಲ್‌ವರೆಗಿನ ರಸ್ತೆ ಅವ್ಯವಸ್ಥೆ ಮತ್ತು ನಿರಂತರ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಜಕೇಸರಿ ಸೇವಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಳೂರು ಜಂಕ್ಷನ್‌ನಿಂದ ಬೈಕಂಪಾಡಿವರೆಗಿನ ಸುಮಾರು 2–3 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳಿಂದ ಕೂಡಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ಪ್ರತಿದಿನ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ರಸ್ತೆ ಸಮಸ್ಯೆಯ ಜೊತೆಗೆ ಸಂಚಾರ ನಿಯಂತ್ರಣದಲ್ಲೂ ಸಂಬಂಧಪಟ್ಟ ಇಲಾಖೆಗಳಿಂದ ನಿರ್ಲಕ್ಷ್ಯವಾಗುತ್ತಿದೆ. ಪೊಲೀಸ್ ಸಂಚಾರ ಇಲಾಖೆ, ಮಹಾನಗರ ಪಾಲಿಕೆ, ಪಿಡಬ್ಲ್ಯುಡಿ, ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂತೋಷ್ ಕೊಲ್ಯ ಒತ್ತಾಯಿಸಿದ್ದಾರೆ.

ಕೂಳೂರು–ಬೈಕಂಪಾಡಿ ಮಾರ್ಗದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಸಮರ್ಪಕ ವ್ಯವಸ್ಥೆ ಇಲ್ಲ. ಬಿಸಿಲು ಹಾಗೂ ಮಳೆಗಾಲದಲ್ಲೂ ಜನರು ಅಪಾಯದ ನಡುವೆ ರಸ್ತೆ ದಾಟಬೇಕಾಗಿದೆ. ಶಾಲಾ ಮಕ್ಕಳ ಸಂಚಾರದ ವೇಳೆಯಲ್ಲೂ ಟ್ರಾಫಿಕ್ ಜಾಮ್ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಭಾಗದಲ್ಲಿ ಬಂದರು, ಎಂಸಿಎಫ್ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳಿದ್ದು, ಭಾರಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಆದರೆ ಸರ್ವಿಸ್ ರಸ್ತೆಗಳ ಸ್ಥಿತಿ ಕೂಡ ಹದಗೆಟ್ಟಿದ್ದು, ವಾಹನಗಳು ಅನಿವಾರ್ಯವಾಗಿ ಮುಖ್ಯ ರಸ್ತೆಯನ್ನೇ ಅವಲಂಬಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

“ಯಾವುದೇ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರು ತೆರಿಗೆ ಪಾವತಿಸುವಲ್ಲಿ ವಿಳಂಬವಾದರೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ. ಹಾಗಾದರೆ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಯಾರು ಹೊಣೆ?” ಎಂದು ಸಂತೋಷ್ ಕೊಲ್ಯ ಪ್ರಶ್ನಿಸಿದ್ದಾರೆ.

ಸುರತ್ಕಲ್‌ನಿಂದ ಕೂಳೂರು ಜಂಕ್ಷನ್‌ವರೆಗೆ ಉಂಟಾಗುತ್ತಿರುವ ನಿರಂತರ ಟ್ರಾಫಿಕ್ ಜಾಮ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ನಂತೂರು–ಕೆಪಿಟಿ ಜಂಕ್ಷನ್‌ನಲ್ಲಿ ಸಂಚಾರ ಸುಗಮಗೊಳಿಸಲು ಕೈಗೊಂಡ ಕ್ರಮಗಳ ಮಾದರಿಯಲ್ಲಿ ಕೂಳೂರು–ಬೈಕಂಪಾಡಿ ಮಾರ್ಗದಲ್ಲೂ ತುರ್ತು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ

SHARE
Loading spinner

One thought on “ಕೂಳೂರು–ಬೈಕಂಪಾಡಿ ರಸ್ತೆ ಅವ್ಯವಸ್ಥೆ: ಅಧಿಕಾರಿಗಳ ವಿರುದ್ಧ ಸಂತೋಷ್ ಕೊಲ್ಯ ಆಕ್ರೋಶ”

  1. [5114]kv888 | Link vào chính thức và hướng dẫn tải app casino,Truy cập kv888 qua link vào chính thức để tải app nhanh chóng. Khám phá cách chơi baccarat online và mẹo quay hũ dễ nổ cùng sảnh game hiện đại. Tham gia ngay! visit: kv888

    Loading spinner

Leave a Reply

Your email address will not be published. Required fields are marked *

error: Content is protected !!