ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಕ್ಟೋಬರ್ 18ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲೆಯ ಜನರಲ್ಲಿ ಹಲವು ನಿರೀಕ್ಷೆಗಳು ಮೂಡಿವೆ. ಈ ಮಹತ್ವದ ಸಭೆಯನ್ನು ಜಿಲ್ಲೆಯಲ್ಲಿ ಆಯೋಜಿಸಿರುವುದಕ್ಕೆ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಸ್ಥಳೀಯ ಮುಖಂಡರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜನಪರ ನಿರ್ಧಾರಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಕೇವಲ ಕಾರ್ಪೊರೇಟ್ ಕಂಪನಿಗಳು ಮತ್ತು ದೊಡ್ಡ ಹೂಡಿಕೆದಾರರಿಗೆ ಅನುಕೂಲವಾಗುವ ನಿರ್ಧಾರಗಳಿಗೆ ಮಾತ್ರ ಆದ್ಯತೆ ನೀಡದೆ, ಬಡವರು, ಮಧ್ಯಮ ವರ್ಗದವರು ಹಾಗೂ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಲಾಗಿದೆ.
ವಿಶೇಷವಾಗಿ ಕಳೆದ ಎರಡು–ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಭಾಗದಲ್ಲಿ ಮರಳು ಮತ್ತು ಕೆಂಪುಕಲ್ಲು ಕೈಗೆಟುಕದ ದರದಲ್ಲಿ ದೊರೆಯುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸ್ವಂತ ಮನೆ ನಿರ್ಮಿಸಿಕೊಳ್ಳಲು ತೊಂದರೆ ಅನುಭವಿಸುತ್ತಿವೆ.

ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತ ಹೂಡಿಕೆದಾರರಿಗೆ ಬೆಲೆ ಏರಿಕೆಯನ್ನು ಭರಿಸುವ ಸಾಮರ್ಥ್ಯವಿರಬಹುದು. ಆದರೆ ವರ್ಷಗಳ ಕಾಲ ಉಳಿತಾಯ ಮಾಡಿ ಮನೆ ಕಟ್ಟಲು ಮುಂದಾಗುವ ಸಾಮಾನ್ಯ ಕುಟುಂಬಗಳಿಗೆ ಮರಳು ಮತ್ತು ಕೆಂಪುಕಲ್ಲಿನ ಬೆಲೆ ಏರಿಕೆ ದೊಡ್ಡ ಹೊರೆ ಎನಿಸಿದೆ.

ಹೀಗಾಗಿ ಅಕ್ಟೋಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಬೇಡಿಕೆ ಕೇವಲ ಒಬ್ಬರದ್ದಲ್ಲ, ಜಿಲ್ಲೆಯ ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಮಸ್ಯೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜನಪರ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

