28 ರಾಜ್ಯಗಳ 28 ಭಾಷೆಗಳಲ್ಲಿ 28 ಗಂಟೆಗಳ ನಿರಂತರ ಗಾಯನ: ಯಶವಂತ್‌ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

ಬೆಂಗಳೂರು : ಭಾರತದ ಏಕತೆ, ಅಖಂಡತೆ ಹಾಗೂ ಭಾಷಾ ವೈವಿಧ್ಯತೆಯನ್ನು ಸಾರುವ ಉದ್ದೇಶದಿಂದ 28 ರಾಜ್ಯಗಳ 28 ಭಾಷೆಗಳಲ್ಲಿ ನಿರಂತರ 28 ಗಂಟೆಗಳ ಕಾಲ ಗಾಯನ ಮಾಡುವ ಮೂಲಕ ಮೂಡುಬಿದಿರೆಯ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಡಾ. ರಾಜ್‌ಕುಮಾರ್ ಆಡಿಟೋರಿಯಂನಲ್ಲಿ ಅಕ್ಟೋಬರ್ 28ರಂದು ಮಧ್ಯಾಹ್ನ 1 ಗಂಟೆಗೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಯೊಂದಿಗೆ ಗಾಯನ ಆರಂಭಿಸಿದ ಯಶವಂತ್, ಅಕ್ಟೋಬರ್ 29ರಂದು ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಹಾಡಿ ಈ ಸಾಧನೆ ಮಾಡಿದ್ದಾರೆ.

ವಿಶೇಷವೆಂದರೆ, ಕಳೆದ ವರ್ಷ ಜೂನ್ 3 ಮತ್ತು 4ರಂದು ಮಂಗಳೂರಿನ ಪುರಭವನದಲ್ಲಿ ದಿವಂಗತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಅಂಗವಾಗಿ 24 ಗಂಟೆಗಳ ನಿರಂತರ ಗಾಯನದ ಮೂಲಕ ಇದೇ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ 28 ಗಂಟೆಗಳ ಕಾಲ ಹಾಡುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಗಾಯನ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಚಾಲನೆ ನೀಡಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಷ್ಣೋಯಿ ಅವರು ಯಶವಂತ್ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು. ಮಹಾಲಕ್ಷ್ಮೀಪುರಂ ಶಾಸಕ ಗೋಪಾಲಯ್ಯ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ ಸಂಗೀತದಲ್ಲಿ ರಾಜಗೋಪಾಲ ಆಚಾರ್ಯ (ಗಿಟಾರ್), ವಾಮನ್ (ರಿದಂ ಪ್ಯಾಡ್), ಪ್ರಜ್ವಲ್ ಆಚಾರ್ಯ, ವೀಕ್ಷಿತ್ ಕೊಡಂಚ (ತಬಲ), ವರ್ಷಾ ಆಚಾರ್ಯ, ಗಣೇಶ್ (ಕೊಳಲು), ಸುಮುಖ್ ಆಚಾರ್ಯ (ಸಿತಾರ್) ಹಾಗೂ ಮೆಲ್ವಿನ್ (ಕೀಬೋರ್ಡ್) ಸಹಕರಿಸಿದರು. ಅರುಣಾ ಭಟ್ ಮೊಗಸಾಲೆ ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಗೀತಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕನ್ನಡದ ಹೆಮ್ಮೆಯ ಗೀತೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಮೂಲಕ ಆರಂಭವಾದ ಗಾಯನ ಅದೇ ಗೀತೆಯೊಂದಿಗೆ ಮುಕ್ತಾಯಗೊಂಡಿದ್ದು, ಭಾಷಾಭಿಮಾನ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!