ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡದ ಮೂವರು ಸಾಧಕರು ಆಯ್ಕೆ

ಮಂಗಳೂರು: ಕರ್ನಾಟಕ ಸರ್ಕಾರ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾಧಕರು ಸೇರಿದಂತೆ ರಾಜ್ಯದ 71 ಮಂದಿ ವಿವಿಧ ಕ್ಷೇತ್ರಗಳ ಸಾಧಕರು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಧ್ಯಮ ಮತ್ತು ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶ್ವನಾಥ್ ಸುವರ್ಣ, ಸಮಾಜ ಸೇವೆ ಕ್ಷೇತ್ರದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗಡೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶ್ವನಾಥ್ ಸುವರ್ಣ: ನಾಲ್ಕೂವರೆ ದಶಕಗಳ ಛಾಯಾಗ್ರಹಣ ಸೇವೆ

ಮಂಗಳೂರಿನಲ್ಲಿ ಜನಿಸಿದ ವಿಶ್ವನಾಥ್ ಸುವರ್ಣ ಅವರು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯಲ್ಲಿ ಸುಮಾರು 45 ವರ್ಷಗಳ ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಸಾರ್ವಜನಿಕ ಜೀವನದ ಅನೇಕ ಮಹತ್ವದ ಘಟನೆಗಳನ್ನು ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿರುವ ಅವರು, ಗಲಭೆ ಮತ್ತು ಸಂಘರ್ಷದಂತಹ ಸವಾಲಿನ ಸಂದರ್ಭಗಳಲ್ಲಿಯೂ ಧೈರ್ಯದಿಂದ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಕರ್ನಾಟಕದ 116 ಕೋಟೆಗಳ ಛಾಯಾಚಿತ್ರ ದಾಖಲೀಕರಣ ಮಾಡಿರುವುದು ಅವರ ವೃತ್ತಿಜೀವನದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಭಾಗವಾಗಿ 600ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಒಳಗೊಂಡ ಆಕರ್ಷಕ ಕಾಫಿ ಟೇಬಲ್ ಪುಸ್ತಕವನ್ನು ರೂಪಿಸಿದ್ದಾರೆ. ‘ಕರುನಾಡಿನ ಕೋಟೆಗಳು’ ಮತ್ತು ‘Ports of Karnataka’ ಅವರ ಪ್ರಮುಖ ಕೃತಿಗಳಾಗಿವೆ.

ಪ್ರಕೃತಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಅವರು, ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಎಂಬ ಛಾಯಾಚಿತ್ರ ಸಂಕಲನವನ್ನು ಪ್ರಕಟಿಸಿದ್ದಾರೆ. ಕರ್ನಾಟಕದ ಪಕ್ಷಿ ಪ್ರಪಂಚದ ವೈವಿಧ್ಯತೆ, ಬಣ್ಣಗಳು ಮತ್ತು ನಿಸರ್ಗದ ಸೌಂದರ್ಯವನ್ನು ದಾಖಲಿಸಿರುವ ಈ ಕೃತಿ ಅವರ ಸೃಜನಶೀಲ ಛಾಯಾಗ್ರಹಣಕ್ಕೆ ಸಾಕ್ಷಿಯಾಗಿದೆ.

ಎ.ಸಿ. ಭಂಡಾರಿ: ತುಳು ಭಾಷೆ ಮತ್ತು ಸಂಸ್ಕೃತಿಯ ಕಟ್ಟಾಳು

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿ ಜನಿಸಿದ ಎ.ಸಿ. ಭಂಡಾರಿ ಅವರು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಮಂಗಳೂರಿನಲ್ಲಿ ಟೈಪ್‌ರೈಟಿಂಗ್ ತರಬೇತಿ ಕೇಂದ್ರ ಸ್ಥಾಪಿಸಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಅವರು, ರಂಗಭೂಮಿಯ ಕಲಾವಿದರೊಂದಿಗೆ ನಿಕಟ ನಂಟು ಬೆಳೆಸಿಕೊಂಡಿದ್ದರು. ತುಳುಕೂಟವನ್ನು ಸ್ಥಾಪಿಸುವ ಮೂಲಕ ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು, 2000ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಕೆಪಿಸಿಸಿ ಕಿಸಾನ್ ಘಟಕದ ಸಹ ಅಧ್ಯಕ್ಷರಾಗಿ ಹಾಗೂ ರಾಜ್ಯ ಖಾದಿ ಬೋರ್ಡ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

2017ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷರಾಗಿ (ಗುರಿಕಾರರಾಗಿ) ಕಾರ್ಯನಿರ್ವಹಿಸುತ್ತಿದ್ದಾರೆ.

ತುಳು ಭಾಷೆಗೆ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನ ಕಲ್ಪಿಸಬೇಕು ಹಾಗೂ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕು ಎಂಬ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಅವರು, ರಂಗಭೂಮಿ ಮತ್ತು ಜಾನಪದ ಕ್ಷೇತ್ರಗಳಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಡಾ. ಇಂದಿರಾ ಹೆಗಡೆ: ತುಳು-ಕನ್ನಡ ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಸಾಧನೆ

ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಡಾ. ಇಂದಿರಾ ಹೆಗಡೆ ಅವರು ಕರಾವಳಿಯ ಖ್ಯಾತ ಲೇಖಕಿ ಮತ್ತು ಸಂಶೋಧಕಿ. ಎಂ.ಎ. ಹಾಗೂ ಡಿ.ಲಿಟ್ ಪದವೀಧರೆಯಾಗಿರುವ ಅವರು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ, ಕಾದಂಬರಿ, ಕಥಾಸಂಕಲನ ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ತುಳುನಾಡಿನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಜಾನಪದ ಪರಂಪರೆಗಳ ಕುರಿತು ಅವರ ಸಂಶೋಧನೆಗಳು ವಿಶೇಷ ಮಹತ್ವ ಪಡೆದಿವೆ.

‘ಮೋಹಿನಿಯ ಸೇಡು’, ‘ಪುರುಷರೇ ನಿಮಗೆ ನೂರು ನಮನಗಳು’, ‘ಬದುಕು’, ‘ಅಮಾಯಕಿ’, ‘ಒಡಲುರಿ’, ‘ಮಂಥನ’, ‘ಬದಿ’ ಹಾಗೂ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಅವರ ಪ್ರಮುಖ ಸಾಹಿತ್ಯ ಕೃತಿಗಳಾಗಿವೆ. ‘ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’, ‘ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು’, ‘ತುಳುವೆರೆ ಅಟಿಲ ಅರಗಣೆ’, ‘ಚೇಳಾರುಗುತ್ತು ಮಂಜನ್ನಾಯ್ಕೆರ್’, ‘ತುಳುವರ ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ’, ‘ಸಿರಿಬಾರಿ ಲೋಕದಲ್ಲಿ ಸಿರಿಗಳು’ ಹಾಗೂ ‘ತುಳುನಾಡಿನ ಕಂಬುಲ-ಒಂದು ಉಪಾಸನಾ ಆಚರಣೆ’ ಅವರ ಪ್ರಮುಖ ಸಂಶೋಧನಾ ಕೃತಿಗಳಲ್ಲಿ ಸೇರಿವೆ.

ಇದಲ್ಲದೆ, ‘ಕಾವ್ಯಗಳ ಪುಟದಿಂದ ನೀನೆದ್ದು ನಿಲ್ಲು’ ಕವನ ಸಂಕಲನ, ‘ಸರ್. ಎಂ. ವಿಶ್ವೇಶ್ವರಯ್ಯ’ ಜೀವನಚರಿತ್ರೆ, ‘ಸಪ್ತ ಕನೈಯರ ನೆಲದಲ್ಲಿ ನಮ್ಮ ನಡೆ’, ‘ಇಂದ್ರಪ್ರಸ್ಥದಿಂದ ಐತಿಹಾಸಿಕ ನಡೆ’ ಮತ್ತು ‘ಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ’ ಪ್ರವಾಸ ಕಥನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನ’ ಕೃತಿಯ ಸಂಪಾದನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಕೊಡುಗೆಗಾಗಿ ವಸುದೇವಭೂಪಾಲಂ, ಅಂಬರೀಷ ಪ್ರಶಸ್ತಿ, ಅತ್ತಿಮಬ್ಬೆ ಅನಂತರಂಗ ಸಂಶೋಧನಾ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಜಾನಪದ ಅಕಾಡಮಿಯ ಗೌರವ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 2026ನೇ ಸಾಲಿನ ಸಂದೇಶ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆ, ಕಾರ್ಯಕಾರಿಣಿ ಸಮಿತಿ ಸದಸ್ಯೆ, ಉಪಾಧ್ಯಕ್ಷೆ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು, ರಾಜ್ಯದ ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ತುಳು ಮತ್ತು ಕನ್ನಡ ಭಾಷೆಗಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!