ಬಂಟ್ವಾಳ: ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ.ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಲು ಬಣ್ಣದ ನಾಯಿಯನ್ನು ಮುಂಜಾನೆ 5 ಗಂಟೆ ವೇಳೆಗೆ ಅಂಗಳ ದಿಂದ ಕೊಂಡು ಹೋಗಿ ಅಲ್ಲೆ ಸಮೀಪದ ರಬ್ಬರ್ ತೋಟದಲ್ಲಿ ಕೊಂದು ಅರ್ಧ ತಿಂದು ಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ ನಾಯಿಯನ್ನು ಚಿರತೆಯೇ ಕೊಂದು ಹಾಕಿದೆ ಎಂಬುದನ್ನು ನೋಡಿದವರು ಯಾರು ಇಲ್ಲ.ಆದರೆ ವಾರಗಳ ಹಿಂದೆ ಅಲ್ಲೇ ಸಮೀಪದ ವಸಂತ ಎಂಬವರ ಮನೆಯ ಕೋಳಿಯನ್ನು ಹಿಡಿದು ತಿಂದ ಘಟನೆ ನಡೆದಿದೆ ಎಂದು ಹೇಳಲಾಗಿದೆ.ಎರಡು ದಿನಗಳ ಹಿಂದೆ ವೇಣೂರು ಭಾಗದ ಮೂರ್ಜೆ ಸಮೀಪದ ಮನೆಯೊಂದರ ಸಾಕು ನಾಯಿಯನ್ನು ಕೊಂದ ಬಗ್ಗೆ ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.ಬಂಟ್ವಾಳ ,ವೇಣೂರು ಹಾಗೂ ಬೆಳ್ತಂಗಡಿ ತಾಲೂಕಿನ ಅನೇಕ ಕಡೆಗಳಲ್ಲಿ ಚಿರತೆಯ ಉಪಟಳ ಕಂಡು ಬಂದಿದ್ದು, ವೇಣೂರು ಭಾಗದಲ್ಲಿ ಚಿರತೆ ಓಡಾಟ ಮಾಡುತ್ತಿದೆ ಎನ್ನಲಾದ ವಿಡಿಯೋ ಕೂಡ ಒಂದು ವೈರಲ್ ಆಗಿದೆ.ಆದರೆ ಇದು ವೇಣೂರು ಭಾಗದ್ದೇ ಎಂಬುದನ್ನು ಇಲಾಖೆಯ ಅಧಿಕಾರಿಗಳು ದೃಡಪಡಿಸುತ್ತಿಲ್ಲ.
ಗರ್ಡಾಡಿ,ಗೋಳಿಯಂಗಡಿ, ಆರಂಬೋಡಿ ಮೂರು ಕಡೆಗಳಲ್ಲಿ ಚಿರತೆಯನ್ನು ಹಿಡಿಯಲು ಬೋನ್ ಇಡಲಾಗಿದೆ ಎಂದು ವೇಣೂರು ಆರಣ್ಯ ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.ಸೋಮವಾರ ರಾತ್ರಿ ಸುಮಾರು 7.30 ರ ವೇಳೆ ಪೇಟೆಯ ಕಡೆಗೆ ಹೋಗಿ ಬರುತ್ತಿದ್ದ ಕೇಶವ ಬುಡೆಂಗೊಟ್ಟು ಎಂಬವರಿಗೆ ಕಾಣಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.ಕುಕ್ಕೇಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದು ಅದೇ ಚಿರತೆ ರಾತ್ರಿ ವೇಳೆ ನಾಯಿಯನ್ನು ಕೊಂದಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. **