ಪುತ್ತೂರು : ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.9ರಿಂದ 12ರ ತನಕ ನಡೆಯಲಿದ್ದು, ಅಯೋಧ್ಯೆಯಿಂದ ಜ್ಯೋತಿ ಹಾಗೂ ಮೂಲ ಮೃತ್ತಿಕೆಯನ್ನು ತರಲು ಹನುಮಗಿರಿಯಿಂದ ರಾಮಹನುಮ ಜ್ಯೋತಿ ರಥಯಾತ್ರೆ ರಾಮ ಜನ್ಮಭೂಮಿ ಅಯೋಧ್ಯೆಗೆ ಹೊರಟಿದ್ದು, ಅಯೋಧ್ಯೆ ತಲುಪಿರುವ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯ ನೆರವೇರಿದೆ.
ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀ ರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಆಗಮಿಸಲಿದೆ. ರಾಮ ದೀಕ್ಷೆಯನ್ನು ಪಡೆದವರಿಗೆ ಕೋಟಿ ಶ್ರೀರಾಮ ತಾರಕ ಮಹಾಯಜ್ಞಾನದ ಸಂದರ್ಭದಲ್ಲಿ ಅಯೋಧ್ಯೆಯ ಪುಣ್ಯ ಮೃತ್ತಿಕೆ (ಮಣ್ಣು) ಮತ್ತು ಪ್ರಸಾದ ರೂಪದಲ್ಲಿ ಗಂಗಾಜಲವನ್ನು ನೀಡಲಾಗುತ್ತದೆ.ರಥಯಾತ್ರೆ ಅಂಜನಾದ್ರಿ ಮೂಲಕ ಹನುಮಗಿರಿಗೆ ಆಗಮಿಸುತ್ತಿದೆ.
ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ದೇವಾಲಯದ ನಿರ್ಮಾಣದ ಉಸ್ತುವಾರಿ ಗೋಪಾಲ್ ಜಿ ಯವರ ನೇತೃತ್ವದಲ್ಲಿ ರಥಯಾತ್ರೆ ಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ, ಬ್ರಹ್ಮಕಲಶ ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ, ಪ್ರಮುಖರಾದ ಜಗದೀಶ್ ಶೇಣವ, ಶ್ರೀಧರ್ ತೆಂಕಿಲ, ಜಿತೇಶ್ ಬಲ್ನಾಡು, ಜಯಂತ್ ಕುಂಜೂರುಪಂಜ, ಜೀವನ್ ಬಲ್ನಾಡು, ಸಿ ಗೋವಿಂದರಾಜು ಯಲಹಂಕ, ನಂದನ್ ತಿಂಗಳಾಡಿ ಸೇರಿದಂತೆ ಹಲವಾರು ಶ್ರೀರಾಮ ಭಕ್ತರು ಭಾಗವಹಿಸಿದ್ದರು.