ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಪ್ರದೇಶದ ಗುಳಿಗಜ್ಜ ಕಟ್ಟೆ ಬಳಿ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಭಾರತಿ ಎಂದು ಗುರುತಿಸಲಾಗಿದೆ. ಅವರು ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿ ರಸ್ತೆ ದಾಟಿ ಗುಳಿಗಜ್ಜ ಕಟ್ಟೆಗೆ ಹಣ ಹಾಕಲು ರಸ್ತೆ ಅಂಚಿಗೆ ತಲುಪಿದ ವೇಳೆ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತಿ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.