ಮಂಗಳೂರಿನಲ್ಲಿ ಲಿಫ್ಟ್ ಅವಘಡದಿಂದ ಕಾರ್ಮಿಕ ಸಾವು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಸಂಸ್ಥೆಯ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಎಸ್.ಡಿ.ಟಿ.ಯು ಆಗ್ರಹ

ಮಂಗಳೂರಿನ ಎಜೆ ಆಸ್ಪತ್ರೆಯ ಮುಂಭಾಗದಲ್ಲಿರುವ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಇನ್ಟಾಮಾರ್ಟ್ ಸಂಸ್ಥೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಬೆಳಲು ಪೂಂಜಕೆರೆ ನಿವಾಸಿ ಅವಿವಾಹಿತ 28 ವರ್ಷದ ಯುವಕ ನೌಫಲ್ ಎಂಬುವರು ಸಂಸ್ಥೆಯ ಅವೈಜ್ಞಾನಿಕವಾಗಿ ಯಾವುದೇ ಪರವಾನಿಗೆ ಪಡೆಯದೆ ನಿರ್ಮಿಸಿದ ಲಿಫ್ಟ್ ನಲ್ಲಿ ಸಿಲುಕಿ ಅವಘಡದಿಂದ ಸಾವನ್ನಪ್ಪಿದ್ದು ಈ ಘಟನೆಯು ಅತ್ಯಂತ ದುಃಖಕರ ಹಾಗೂ ಆತಂಕಕಾರಿ ಘಟನೆ ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಿರಂತರವಾಗಿ ನಿರ್ಮಾಣ ಕಾಮಗಾರಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿರುವ ಪರಿಣಾಮ ಅಮಾಯಕ ಕಾರ್ಮಿಕರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯವಾದ ತಾಂತ್ರಿಕ ವ್ಯವಸ್ಥೆಗಳು, ನಿಯಮಿತ ಪರಿಶೀಲನೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಇರುವ ಸಂಸ್ಥೆಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ.


ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣವೇ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆ ವತಿಯಿಂದ ಸೂಕ್ತ ಪರಿಹಾರ ಘೋಷಿಸಬೇಕು ಮತ್ತು ಘಟನೆಗೆ ಕಾರಣರಾದ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಲಿಫ್ಟ್ ಹಾಗೂ ನಿರ್ಮಾಣ ಕಾಮಗಾರಿಗಳ ಸುರಕ್ಷತಾ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆ ತಕ್ಷಣ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು ಎಂದು SDTU ಒತ್ತಾಯಿಸುತ್ತದೆ.

ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುವ ವ್ಯವಸ್ಥೆಯ ವಿರುದ್ಧ SDTU ಹೋರಾಟ ಮುಂದುವರಿಸಲಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!