ಮಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಕ್ರೀಡಾಂಗಣದ ನೈಜ ಅನುಭವ ನೀಡುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಮಂಗಳೂರಿನಲ್ಲಿ ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಐಪಿಎಲ್ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳ ರೋಚಕತೆಯನ್ನು ಕರಾವಳಿಯ ಜನತೆಗೆ ಉಚಿತವಾಗಿ ತಲುಪಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಲಾಲ್ಬಾಗ್ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ (ಮಾರ್ಟಿನ್ ಪಾಯ್ಸ್ ರಸ್ತೆ) ಫ್ಯಾನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೇ 29ರಂದು ನಡೆಯಲಿರುವ ಪ್ಲೇ-ಆಫ್ ಪಂದ್ಯ ಹಾಗೂ ಮೇ 31ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಬೃಹತ್ ಪರದೆಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಎರಡೂ ದಿನ ಸಂಜೆ 5.30ರಿಂದ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಬಿಸಿಸಿಐ ಪ್ರತಿನಿಧಿ ವಿಕಾಸ್ ಪಂಡಿತ್ ಮಾತನಾಡಿ, ದೇಶದ 50 ಪ್ರಮುಖ ನಗರಗಳಲ್ಲಿ ಈ ಫ್ಯಾನ್ ಪಾರ್ಕ್ಗಳನ್ನು ಆಯೋಜಿಸಲಾಗುತ್ತಿದೆ. ಮಂಗಳೂರಿನ ಅಭಿಮಾನಿಗಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿರಲಿದೆ ಎಂದು ಹೇಳಿದರು.
ಪಂದ್ಯದ ನೇರ ಪ್ರಸಾರದ ಜೊತೆಗೆ ಸಂಗೀತ ಕಾರ್ಯಕ್ರಮ, ಅಧಿಕೃತ ಪ್ರಾಯೋಜಕರಿಂದ ಮೋಜಿನ ಆಟಗಳು, ವಿವಿಧ ಆಹಾರ ಮಳಿಗೆಗಳು, ಪಾನೀಯಗಳು ಹಾಗೂ ಐಪಿಎಲ್ ಮರ್ಚಂಡೈಸ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಿದಂತೆಯೇ ಲೈವ್ ಅನುಭವ ಸಿಗಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ ಪ್ರತಿನಿಧಿ ವಿಕಾಸ್ ಪಂಡಿತ್ ಉಪಸ್ಥಿತರಿದ್ದರು.