ಜಮೀರ್ ಮತ್ತು ನನ್ನ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ಇಲ್ಲ: ಯು.ಟಿ. ಖಾದರ್

ಮಂಗಳೂರು, ಜೂನ್ 2: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ತಮ್ಮ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ನಡುವೆ ಯಾವುದೇ ರೀತಿಯ ಸಚಿವ ಸ್ಥಾನ ಪೈಪೋಟಿ ಇಲ್ಲ ಎಂದು ವಿಧಾನಸಭಾಧ್ಯಕ್ಷ U. T. Khader ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಡಿಸಿಎಂ ಸ್ಥಾನ ಸಿಗುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, “ನಾನು ಅದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.

“ನಾನು ಈಗ ಸ್ಪೀಕರ್ ಆಗಿದ್ದೇನೆ. ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಯಾರಿಗೆ ಯಾವ ಹುದ್ದೆ ನೀಡಬೇಕು ಎಂಬುದನ್ನು ಸರ್ಕಾರ ಮತ್ತು ಪಕ್ಷದ ನಾಯಕತ್ವವೇ ನಿರ್ಧರಿಸುತ್ತದೆ” ಎಂದು ಖಾದರ್ ಹೇಳಿದರು.

2023ರಲ್ಲಿ ಸಚಿವ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬಂದಿದ್ದರೂ ಪಕ್ಷವು ಸಭಾಧ್ಯಕ್ಷರ ಹುದ್ದೆ ನೀಡಿದ್ದು, ಅದನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ ಎಂದು ಅವರು ತಿಳಿಸಿದರು.

“ನನಗೆ ಹುದ್ದೆ ಮುಖ್ಯವಲ್ಲ, ಕೆಲಸ ಮುಖ್ಯ. ಪಕ್ಷ ಹಾಗೂ ನಾಯಕತ್ವ ನನ್ನ ಕೆಲಸವನ್ನು ನೋಡಿ ಯಾವುದೇ ಜವಾಬ್ದಾರಿ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ” ಎಂದರು.

ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಸಭಾಧ್ಯಕ್ಷರ ಹುದ್ದೆಯಿಂದ ಹೊರಬಂದ ನಂತರ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಈಗ ಆ ಕುರಿತು ಪ್ರತಿಕ್ರಿಯಿಸುವುದು ಸೂಕ್ತವಲ್ಲ” ಎಂದು ಹೇಳಿದರು.

ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸಂಬಂಧದ ಬಗ್ಗೆ ಮಾತನಾಡಿದ ಖಾದರ್, “ನಮ್ಮಿಬ್ಬರ ನಡುವೆ ಯಾವುದೇ ಪೈಪೋಟಿ ಇಲ್ಲ. ರಾಜಕೀಯ ಒಂದು, ವೈಯಕ್ತಿಕ ಭೇಟಿ ಮತ್ತೊಂದು. ನಾವು ಹಿತೈಷಿಗಳಾಗಿ ಭೇಟಿಯಾಗುತ್ತೇವೆ” ಎಂದು ಸ್ಪಷ್ಟಪಡಿಸಿದರು.

“ಒಬ್ಬ ಶಾಸಕನಾದವನು ಜೀವನದಲ್ಲಿ ಒಮ್ಮೆಯಾದರೂ ಸಭಾಧ್ಯಕ್ಷನಾಗಬೇಕು. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಪಕ್ಷ, ಕಾರ್ಯಕರ್ತರು ಮತ್ತು ಮತದಾರರು. ಕಳೆದ ಮೂರು ವರ್ಷಗಳಿಂದ ಸಭಾಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ” ಎಂದು ಖಾದರ್ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!