ಬಸ್ ಮಾದರಿಯ ವಿನೂತನ ತಂಗುದಾಣ; ಗುರುಪುರದ ಬಂಡಸಾಲೆಯಲ್ಲಿ ಹೊಸ ಆಕರ್ಷಣೆ

ಮಂಗಳೂರು: ಮಂಗಳೂರು ಹೊರವಲಯದ ಗುರುಪುರ ಸಮೀಪದ ಬಂಡಸಾಲೆಯಲ್ಲಿ ನಿರ್ಮಾಣಗೊಂಡಿರುವ ವಿನೂತನ ಬಸ್ ತಂಗುದಾಣ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸಾಮಾನ್ಯ ಬಸ್ ಶೆಲ್ಟರ್‌ಗಳಿಗಿಂತ ಭಿನ್ನವಾಗಿ, ನಿಜವಾದ ಬಸ್‌ನ ಮಾದರಿಯಲ್ಲೇ ನಿರ್ಮಿಸಲಾಗಿರುವ ಈ ತಂಗುದಾಣ ಪ್ರಯಾಣಿಕರಿಗೆ ಆಸರೆಯಾಗುವುದರ ಜೊತೆಗೆ ಪ್ರದೇಶದ ಹೊಸ ಆಕರ್ಷಣೆಯ ಕೇಂದ್ರವಾಗಿದೆ.

ಸ್ಥಳೀಯ ವಿ2 ಗೈಸ್ ಯುವ ಬಳಗದ ಪರಿಕಲ್ಪನೆಯಡಿ ನಿರ್ಮಾಣಗೊಂಡಿರುವ ಈ ವಿಶೇಷ ತಂಗುದಾಣ ಮೊದಲ ನೋಟಕ್ಕೆ ರಸ್ತೆಯ ಬದಿಯಲ್ಲಿ ಬಸ್ ನಿಂತಿರುವಂತೆ ಭಾಸವಾಗುತ್ತದೆ. ಅದರ ವಿಶಿಷ್ಟ ವಿನ್ಯಾಸವು ಪ್ರಯಾಣಿಕರು ಮಾತ್ರವಲ್ಲದೆ ಸ್ಥಳೀಯರು ಹಾಗೂ ಪ್ರವಾಸಿಗರ ಗಮನವನ್ನೂ ಸೆಳೆಯುತ್ತಿದೆ.

ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಬಸ್ ತಂಗುದಾಣ ಆಧುನಿಕ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹಿಂದೆ ಇದೇ ಸ್ಥಳದಲ್ಲಿದ್ದ ಹಳೆಯ ತಂಗುದಾಣ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ.

ಹೊಸ ರೂಪದಲ್ಲಿ ನಿರ್ಮಾಣಗೊಂಡಿರುವ ಬಂಡಸಾಲೆ ಬಸ್ ತಂಗುದಾಣ ಇದೀಗ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಆಶ್ರಯ ಒದಗಿಸುತ್ತಿದೆ. ಸಾಮಾಜಿಕ ಕಾಳಜಿ ಹಾಗೂ ಸೃಜನಾತ್ಮಕ ಚಿಂತನೆಯಿಂದ ಸಾರ್ವಜನಿಕ ಸ್ಥಳಗಳನ್ನೂ ಮಾದರಿ ತಾಣಗಳನ್ನಾಗಿ ರೂಪಿಸಬಹುದು ಎಂಬುದಕ್ಕೆ ಈ ಯೋಜನೆ ಉತ್ತಮ ಉದಾಹರಣೆಯಾಗಿದೆ.

ಈ ಕುರಿತು ಮಾತನಾಡಿದ ವಿ2 ಗೈಸ್ ಯುವ ಬಳಗದ ಪ್ರತಿನಿಧಿ ಪ್ರಶಾಂತ್, “ಹಳೆಯ ಬಸ್ ತಂಗುದಾಣ ಸಂಪೂರ್ಣ ಹಾಳಾಗಿತ್ತು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ವಿಭಿನ್ನವಾಗಿ ಕಾಣುವ ರೀತಿಯಲ್ಲಿ ಬಸ್ ಮಾದರಿಯ ತಂಗುದಾಣ ನಿರ್ಮಿಸಿದ್ದೇವೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ” ಎಂದು ತಿಳಿಸಿದರು.

ಸಾಮಾನ್ಯ ಬಸ್ ತಂಗುದಾಣವೊಂದನ್ನು ಹೊಸ ಕಲ್ಪನೆಯೊಂದಿಗೆ ಆಕರ್ಷಕ ಸಾರ್ವಜನಿಕ ತಾಣವನ್ನಾಗಿ ರೂಪಿಸಿದ ಬಂಡಸಾಲೆಯ ಈ ಪ್ರಯತ್ನ ಇದೀಗ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!