ವಿಧಾನ ಪರಿಷತ್‌ಗೆ ಪಿ.ವಿ. ಮೋಹನ್ ಆಯ್ಕೆ ರಾಜ್ಯಕ್ಕೆ ಮಾದರಿ: ದಲಿತ ಸಂಘಟನೆಗಳ ಒಕ್ಕೂಟ

ಮಂಗಳೂರು, ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ಸಾಮಾಜಿಕ ಚಳುವಳಿಗಳೊಂದಿಗೆ ಗುರುತಿಸಿಕೊಂಡು, ಜಾತಿ-ಮತ-ಧರ್ಮ-ಭಾಷೆಗಳ ಆಚೆಗೆ ನಿಂತು ಬಡವರು, ಶೋಷಿತರು, ವಿದ್ಯಾರ್ಥಿಗಳು ಹಾಗೂ ಯುವಜನರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿರುವ ಹಿರಿಯ ಚಿಂತಕ, ಮಾಜಿ ಪತ್ರಕರ್ತ, ಜನಪರ ಹೋರಾಟಗಾರ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಪಿ.ವಿ. ಮೋಹನ್ ಅವರನ್ನು ಜೂನ್ 18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಶಾಸಕರು ಪಕ್ಷಭೇದ ಮರೆತು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲುಷಿತಗೊಂಡಿರುವ ರಾಜಕೀಯ ವಾತಾವರಣದಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಾಮಾಜಿಕ ಬದ್ಧತೆಯ ರಾಜಕಾರಣಕ್ಕೆ ಹೆಸರಾಗಿರುವ ಪಿ.ವಿ. ಮೋಹನ್ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ
ರಾಹುಲ್ ಗಾಂಧಿ , ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ. ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಸೇರಿದಂತೆ ಈ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸಾಮಾಜಿಕ ಕಾಳಜಿ ಮತ್ತು ಜನಪರ ಬದ್ಧತೆಯುಳ್ಳ ಪಿ.ವಿ. ಮೋಹನ್ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಹಾಗೂ ವೃತ್ತಿ ಆಧಾರಿತ ರಾಜಕಾರಣಕ್ಕಿಂತ ಭಿನ್ನವಾದ ಜನಪರ ರಾಜಕಾರಣದ ಹೊಸ ಅಧ್ಯಾಯ ಆರಂಭವಾಗಲಿದೆ. ಇದು ರಾಜ್ಯಕ್ಕೆ ಮಾದರಿಯಾಗುವುದಲ್ಲದೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದನಿ ಇಲ್ಲದ ಶೋಷಿತ ಸಮುದಾಯಗಳು, ವಿದ್ಯಾರ್ಥಿಗಳು ಮತ್ತು ಯುವಜನರ ಆಶೋತ್ತರಗಳಿಗೆ ರಾಜ್ಯ ವಿಧಾನ ಪರಿಷತ್‌ನಲ್ಲಿ ಬಲವಾದ ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಮಲ, ಅಹಿಂದ ಉಪಾಧ್ಯಕ್ಷ ಬಿ.ಎ.ಎಂ. ಹನೀಫ್, ಅಶೋಕ್ ಭಟ್, ಪದ್ಮನಾಭ, ರೆನ್ನಿ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!