ಮಂಗಳೂರು: ಉಬರ್ ಕಂಪೆನಿಯ ಅನ್ಯಾಯದ ನೀತಿ ಹಾಗೂ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುತ್ತಿರುವ ಕ್ರಮಗಳನ್ನು ಖಂಡಿಸಿ, ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಬರ್ ಟ್ಯಾಕ್ಸಿ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಮಂಗಳೂರು ನಗರ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ಆನ್‌ಲೈನ್ ಟ್ಯಾಕ್ಸಿ ಚಾಲಕರ ಹಕ್ಕುಗಳನ್ನು ಕಡೆಗಣಿಸಿ ಉಬರ್ ಕಂಪೆನಿ ಅನುಸರಿಸುತ್ತಿರುವ ನೀತಿಗಳು ಚಾಲಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಕಾರ್ಮಿಕರ ಹಕ್ಕು, ಉದ್ಯೋಗ ಭದ್ರತೆ ಹಾಗೂ ಅವರ ಜೀವನೋಪಾಯಕ್ಕೆ ಧಕ್ಕೆ ತರುವ ಯಾವುದೇ ಕ್ರಮವನ್ನು ಎಸ್.ಡಿ.ಟಿ.ಯು ತೀವ್ರವಾಗಿ ವಿರೋಧಿಸುತ್ತದೆ.
ಚಾಲಕರ ನ್ಯಾಯಸಮ್ಮತ ಬೇಡಿಕೆಗಳನ್ನು ಉಬರ್ ಕಂಪೆನಿ ತಕ್ಷಣ ಪರಿಗಣಿಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲವಾದಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಸ್.ಡಿ.ಟಿ.ಯು ಹೋರಾಟದೊಂದಿಗೆ ಹೆಜ್ಜೆ ಹಾಕಲಿದೆ ಎಂದು ತಿಳಿಸಿದೆ.
ಮಂಗಳೂರು ಆನ್‌ಲೈನ್ ಟ್ಯಾಕ್ಸಿ ಯೂನಿಯನ್ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿಯು ತನ್ನ ಸಂಪೂರ್ಣ ನೈತಿಕ ಹಾಗೂ ಸಂಘಟನಾತ್ಮಕ ಬೆಂಬಲವನ್ನು ನೀಡಲಿದೆ ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.