ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ದೈಹಿಕ–ಮಾನಸಿಕ ಆರೋಗ್ಯ ವೃದ್ಧಿಗೆ ವಿಶೇಷ ಕೇಂದ್ರ
ಪುತ್ತೂರು, ಜು. 10: ಫಿಟ್‌ನೆಸ್ ಅಥವಾ ತೂಕ ಇಳಿಕೆ ಕೇಂದ್ರವಲ್ಲದೆ, ಯೋಗ, ಧ್ಯಾನ, ಪ್ರಾಣಾಯಾಮ ಸೇರಿದಂತೆ ವಿವಿಧ ಆರೋಗ್ಯಪರ ವಿಧಾನಗಳ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರಂಭಿಸಲಾಗಿರುವ ‘ಸ್ವಾತಿ ಆಕೃತಿ ವೆಲ್‌ನೆಸ್’ ಸಂಸ್ಥೆಯು ಜುಲೈ 13ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಅರುಣಾ ಕಲಾ ಮಂದಿರದ ಬಳಿಯ ಕೃಷ್ಣಪ್ರಸಾದ್ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮಾಲಕಿ ಹಾಗೂ ಯೋಗಪಟು ಉಜಿರೆ ಮೂಲದ ಸ್ವಾತಿ ಬಿ. ಶೆಟ್ಟಿ, ಬಾಲ್ಯದಿಂದಲೇ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು, ಬೆಂಗಳೂರಿನಲ್ಲಿ ತರಬೇತಿ ಹಾಗೂ ಅನುಭವ ಪಡೆದ ಬಳಿಕ ಪುತ್ತೂರಿನ ವೈದ್ಯರ್ಸ್ ಆಸ್ಪತ್ರೆ ಮತ್ತು ಮುಳಿಯ ಜಿಮ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವದ ಆಧಾರದ ಮೇಲೆ ಈ ಸಂಸ್ಥೆಯನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.
ಸಂಸ್ಥೆಯಲ್ಲಿ ಎಲ್ಲಾ ವಯೋಮಾನದವರಿಗೆ ಅವರ ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಇತರ ದೈಹಿಕ ಚಟುವಟಿಕೆಗಳ ತರಬೇತಿಯನ್ನು ನೀಡಲಾಗುವುದು. ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಅವರ ಸಮಗ್ರ ಬೆಳವಣಿಗೆಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಹಿತೈಷಿ ಡಾ. ಅನನ್ಯಲಕ್ಷ್ಮೀ ಸಂದೀಪ್ ಹೇಳಿದರು.
ಜುಲೈ 13ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮುಳಿಯ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ, ವೈದ್ಯರ್ಸ್ ಆಯುರ್ವೇದ ಆಸ್ಪತ್ರೆಯ ಮಾಲಕ ಡಾ. ಪ್ರಶಾಂತ್ ಜಾನ, ಕಟ್ಟಡದ ಮಾಲಕ ಕೆ. ಕೃಷ್ಣ ಕಾಮತ್ ಹಾಗೂ ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸ್ವಾತಿ ಬಿ. ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅನನ್ಯಲಕ್ಷ್ಮೀ ಸಂದೀಪ್ ಹಾಗೂ ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಕೆ. ಮೊಟ್ಟೆತಡ್ಕ ಉಪಸ್ಥಿತರಿದ್ದರು.


