ಮಂಗಳೂರು :ಬೆಂದೂರು ಲಾಡ್ಜ್ನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನಿಸಿದವರಿಂದ 35.53 ಗ್ರಾಂ ಮಾದಕ ವಸ್ತು ಸಮೇತ ಮೂವರನ್ನು ಬಂಧಿಸಲಾಗಿದೆ.ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA)ಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ನದೀಂ (27), ಉಮರುಲ್ ಫಾರೂಕ್ (30) ಹಾಗೂ ಇಮ್ಮಿಯಾಜ್ ಇಸ್ಮಾಯಿಲ್ ಕಿನ್ಯಾ (41) ಎಂದು ಗುರುತಿಸಲಾಗಿದೆ.
ಜೂನ್ 23ರಂದು ಮಂಗಳೂರು ನಗರದ ಬೆಂದೂರಿನಲ್ಲಿರುವ ಲಾಡ್ಜ್ ಒಂದರಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು. ಈ ವೇಳೆ ಆರೋಪಿಗಳಿಂದ ಸುಮಾರು 35.53 ಗ್ರಾಂ ಎಂಡಿಎಂಎ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಅವರನ್ನು ವಶಕ್ಕೆ ಪಡೆದುಕೊಂಡರು.ನಂತರ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8(c) ಮತ್ತು 22(C) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.