ಕುದ್ಮುಲ್ ರಂಗರಾವ್ ಜಯಂತಿ ಜು.5ರಂದು: ಉಚಿತ ಕಾಲೇಜು ಬ್ಯಾಗ್ ವಿತರಣೆ

ಮಂಗಳೂರು, ಜು. 4: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ವತಿಯಿಂದ ಮಹಾನ್ ಸಮಾಜ ಸುಧಾರಕ, ಶಿಕ್ಷಣದ ಹರಿಕಾರ ಹಾಗೂ ದಲಿತೋದ್ಧಾರದ ಮುಂಚೂಣಿ ನಾಯಕರಾದ ಕುದ್ಮುಲ್ ರಂಗರಾವ್ ಅವರ ಜಯಂತಿಯನ್ನು ಜುಲೈ 5ರಂದು (ಭಾನುವಾರ) ಬೆಳಿಗ್ಗೆ 10.30ಕ್ಕೆ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಜಯಂತಿ ಅಂಗವಾಗಿ ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕಾಲೇಜು ಬ್ಯಾಗ್‌ಗಳನ್ನು ವಿತರಿಸಲಾಗುವುದು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಮುಖ ನಾಯಕರಿಗೆ ಅಭಿನಂದನಾ ಸಮಾರಂಭವೂ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಜಕ್ಕಪ್ಪ ಹಾಗೂ ಪಿ.ವಿ. ಮೋಹನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇದಲ್ಲದೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾ ಕಾಂಗ್ರೆಸ್ ಮುಖಂಡರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳ ಕುರಿತು ಕುದ್ಮುಲ್ ರಂಗರಾವ್ ಅವರ ಆದರ್ಶಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಚಿತ ಕಾಲೇಜು ಬ್ಯಾಗ್‌ಗಳನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷರ ಬಳಿ ಪೂರ್ವಭಾವಿಯಾಗಿ ಹೆಸರು ನೋಂದಾಯಿಸಿರುವ ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ನಿಗಮ-ಮಂಡಳಿಗಳ ನಾಮನಿರ್ದೇಶಿತ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ಅಧ್ಯಕ್ಷ ದಿನೇಶ್ ಮೂಳೂರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!