ಮಂಗಳೂರು, ಜು. 4: ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪ್ರದೇಶದಲ್ಲಿ ಹಲವು ದಶಕಗಳಿಂದ ಸ್ಥಳೀಯರನ್ನು ಕಾಡುತ್ತಿರುವ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿ ದರ್ಶನ್ ಅವರ ಸಮ್ಮುಖದಲ್ಲಿ ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಟಿ. ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸುಮಾರು 75 ವರ್ಷಗಳಿಂದ ಈ ಪ್ರದೇಶದಲ್ಲಿ ಸಮರ್ಪಕ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯರ ಪ್ರಮುಖ ಸಮಸ್ಯೆಯಾಗಿದ್ದು, ಈ ಹಿಂದೆ ಕುಡ್ಸೆಂಪ್ ವತಿಯಿಂದ ಅಗತ್ಯ ಅನುದಾನ ಮೀಸಲಿಡಲಾಗಿದ್ದರೂ ನೆಲದಡಿಯಲ್ಲಿ ಬಂಡೆಕಲ್ಲುಗಳಿರುವ ಭೌಗೋಳಿಕ ಸವಾಲಿನ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಾಗಿರಲಿಲ್ಲ.



ಈ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯರೊಂದಿಗೆ ಮತ್ತೊಮ್ಮೆ ಸಮಗ್ರ ಚರ್ಚೆ ನಡೆಸಲಾಗಿದೆ. ಯೋಜನೆ ಜಾರಿಗೊಳಿಸಲು ಸುಮಾರು ₹2.5 ಕೋಟಿಯಿಂದ ₹3 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಅಗತ್ಯ ಅನುದಾನವನ್ನು ಮಂಜೂರು ಮಾಡಿ ಯೋಜನೆಗೆ ಸಂಪೂರ್ಣ ಸಹಕಾರ ನೀಡುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಟಿ., ಕುಡ್ಸೆಂಪ್‌ನಲ್ಲಿ ಉಳಿಕೆ ಅಥವಾ ಹೆಚ್ಚುವರಿ ಅನುದಾನದ ಲಭ್ಯತೆಯನ್ನು ಪರಿಶೀಲಿಸಿ ಯೋಜನೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ, ಈ ಕುರಿತು ಸಂಬಂಧಿತ ಅಧಿಕಾರಿಗಳು ಶೀಘ್ರದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


