ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದು ಕೇಂದ್ರದ ಜವಾಬ್ದಾರಿ: ಐವನ್ ಡಿ’ಸೋಜಾ

ಮಂಗಳೂರು:ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ದೇಶದಿಂದ ಹೊರಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆರೋಪಿಸಿದರು.ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಇತಿಹಾಸ ಹಾಗೂ ಅಂಕಿ-ಅಂಶಗಳ ಆಧಾರದ ಮೇಲೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರದಲ್ಲಿ ಬಿಜೆಪಿ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ ದೇಶದಿಂದ ಎಷ್ಟು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಪ್ರಕಟಿಸಬೇಕು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪತ್ತೆಯಾದ ಅಕ್ರಮ ವಲಸಿಗರ ಸಂಖ್ಯೆ ಹಾಗೂ ಅವರನ್ನು ದೇಶದಿಂದ ಹೊರಹಾಕಿರುವ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ವಲಸಿಗರ ಹೆಸರಿನಲ್ಲಿ ಅಲ್ಪಸಂಖ್ಯಾತರು ಹಾಗೂ ನೈಜ ಮತದಾರರನ್ನು ಗುರಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ದೇಶದ ಗಡಿ ಭದ್ರತೆ ಹಾಗೂ ನುಸುಳುಕೋರರನ್ನು ತಡೆಯುವ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದ ಮೇಲಿದೆ ಎಂದು ಹೇಳಿದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಕಾಂಗ್ರೆಸ್ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಯಾವುದೇ ನೈಜ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂಬುದು ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದರು.

ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಪಕ್ಷದ ಪ್ರತಿನಿಧಿಗಳನ್ನು ನೇಮಿಸಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕಾರ ನೀಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಿದ್ದು, ಅಧಿಕಾರಿಗಳನ್ನು ನಿಯೋಜಿಸಿ ನಿಯಮಾನುಸಾರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಆದರೂ ಚುನಾವಣಾ ಆಯೋಗದ ಮೇಲೆಯೇ ಬಿಜೆಪಿ ಅನುಮಾನ ವ್ಯಕ್ತಪಡಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ ಹಾಗೂ ಭಾಸ್ಕರ್ ಮೊಯ್ಲಿ , ಮಾಜಿ ಕಾರ್ಪೊರೇಟರ್‌ಗಳಾದ ಶ್ರೀ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿ ಎಸ್ ಹಾಗೂ ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಜೇಮ್ಸ್ ಪ್ರವೀಣ್, ಆಲ್ಸ್ಟನ್ ಡಿ’ಕುನ್ನಾ, ಇಮ್ರಾನ್ ಆ.ಆರ್, ಮನೀಶ್ ಬೋಳಾರ್ ಹಾಗೂ ಮನೋಜ್ ಎಂ.ಪಿ. ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!