ಕಲಾವಿದರಿಗೆ ಅವಕಾಶದ ವೇದಿಕೆ ಶ್ರೇಷ್ಟ ಕಾರ್ಯ – ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ

ಕೆನರಾ ಶಾಲೆಯ ನಿತ್ಯ ಕಲಾ ವೇದಿಕೆ ವಿಶಿಷ್ಟ ಕಲ್ಪನೆ ಮತ್ತು ಮಾದರಿ ಪ್ರಯೋಗ. ಬಲವಾದ ಯೋಚನೆ, ತಂಡ ಶಕ್ತಿಯಿಂದ ಮಾತ್ರ ಇಂತಹ ದೂರದೃಷ್ಟಿಯ ಚಿಂತನೆ ಸಾಧ್ಯ ಎಂದು ಖ್ಯಾತ ಭರತನಾಟ್ಯ ಗುರುಗಳಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ವೇದಿಕೆ ಮಂಗಳೂರಿನಲ್ಲಿ ಅತೀ ಅಗತ್ಯವಾಗಿ ಬೇಕಾಗಿತ್ತು. ಎಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಗೊಳಿಸಲು ವೇದಿಕೆಯ ಅವಶ್ಯಕತೆ ಇರುತ್ತದೆ. ದೊಡ್ಡ ಕಲಾವಿದರಾಗಿ ಬೆಳೆಯಲು ಇಂತಹ ಅವಕಾಶಗಳೇ ಪ್ರಮುಖ ಮೆಟ್ಟಿಲುಗಳಾಗಿರುತ್ತವೆ. ನಿತ್ಯ ಕಲಾ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುವ ಮಕ್ಕಳಿಗೆ ಇದೊಂದು ಹೆಮ್ಮೆಯ ವಿಷಯವಾಗುವಂತಾಗಲಿ ಎಂದು ಅವರು ಶುಭ ಹಾರೈಸಿದರು. ಇದರ ಯಶಸ್ಸಿಗೆ ಶ್ರಮಿಸುತ್ತಿರುವ ಕೆನರಾ ಕಲ್ಚರಲ್ ಅಕಾಡೆಮಿಯ ಸರ್ವರಿಗೂ ಅವರು ಅಭಿನಂದನೆ ಸಲ್ಲಿಸಿದರು.


ವಿದ್ವಾನ್ ಉಪೇಂದ್ರ ಮಲ್ಯ ಮಾತನಾಡಿ, ನಿತ್ಯ ಕಲಾ ವೇದಿಕೆಯಲ್ಲಿ ಕಲಾ ಪ್ರದರ್ಶನ ನೀಡಲು ಹೆಚ್ಚೆಚ್ಚು ಮಕ್ಕಳು ಉತ್ಸಾಹ ತೋರುವಂತಾಗಲಿ ಎಂದು ಹಾರೈಸಿದರು. ಡೊಂಗರಕೇರಿಯಲ್ಲಿರುವ ಕೆನರಾ ಹಿರಿಯ ಪ್ರಾರ್ಥಮಿಕ ಶಾಲೆಯ ಶ್ರೀ ಕೃಷ್ಣ ಮಂದಿರದ ವೇದಿಕೆಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ವಿದ್ವಾನ್ ಉಪೇಂದ್ರ ಮಲ್ಯ, ಶ್ರೀಮತಿ ರಾಧಿಕಾ ಶೆಟ್ಟಿ, ಶ್ರೀ ರೋಹಿತ್ ಉಚ್ಚಿಲ್, ಶ್ರೀ ಸುನೀಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಅನನ್ಯ ರಂಜನಿ ಅವರು ಒಂದು ಗಂಟೆಯ ಕಾಲ ಭರತನಾಟ್ಯ ಪ್ರದರ್ಶನ ನೀಡಿದರು. ನಂತರ ಮಾತನಾಡಿದ ಅವರು ಕೆನರಾ ಶಿಕ್ಷಣ ಸಂಸ್ಥೆ ನೀಡಿದ ಅವಕಾಶ ಯಾವತ್ತೂ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು. ಕೆನರಾ ಕಲ್ಚರಲ್ ಅಕಾಡೆಮಿಯ ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರತಿ ದಿನ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನೃತ್ಯ, ಸಂಗೀತ, ಗಾಯನ, ಲಲಿತಕಲೆ ಸಹಿತ ಸಾಂಪ್ರದಾಯಿಕ ಕಲಾಪ್ರದರ್ಶನ ನೀಡಲು ಈ ವೇದಿಕೆ ರಚನೆಯಾಗಿದೆ. ನಾಡಿನ ಯಾವುದೇ ಭಾಗದ, ಯಾವುದೇ ಶಿಕ್ಷಣ ಸಂಸ್ಥೆಯ ಮಕ್ಕಳು ಇಲ್ಲಿ ಕಲಾಪ್ರದರ್ಶನ ನೀಡಲು ಸುಸಜ್ಜಿತ ಧ್ವನಿ, ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರತಿ ದಿನದ ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಸ್ವಾಗತವಿದೆ. ಕೆನರಾ ಯೂಟ್ಯೂಬ್ ವಾಹಿನಿಯಲ್ಲಿ ಕಾರ್ಯಕ್ರಮ ನೇರಪ್ರಸಾರವಿರುತ್ತದೆ. ಕೆನರಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಭವಿಷ್ಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವಂತಾಗಲಿ. ಅದಕ್ಕೆ ಎಲ್ಲಾ ಕಲಾಗುರುಗಳು, ಮಕ್ಕಳ ಪೋಷಕರು ಸಹಕರಿಸಬೇಕು. ಕಲಾ ಪ್ರದರ್ಶನ ನೀಡುವ ಮಕ್ಕಳು ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಕೆನರಾ ವತಿಯಿಂದ ಕಲಾವಿದೆಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಸುರೇಶ್ ಕಾಮತ್, ಮುಖ್ಯ ಶಿಕ್ಷಕಿ ಉಜ್ವಲ್ ಮಲ್ಯ, ಕಾರ್ಯಕ್ರಮ ಸಂಚಾಲಕರಾದ ಉಜ್ವಲ್ ಯು.ವಿ., ದೀಪ್ತಿ ನಾಯಕ್ ಹಾಗೂ ಮುಖ್ಯೋಪಾಧ್ಯಾಯರುಗಳು, ಶಿಕ್ಷಕರು, ಪೋಷಕರು, ಗಣ್ಯರು ಉಪಸ್ಥಿತರಿದ್ದರು. ಬೃಂದಾವನ ಶೆಟ್ಟಿ ನಿರೂಪಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!