ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆ

ಈ ಬಾರಿ ಯಕ್ಷಗಾನ ಅಕಾಡೆಮಿ ಘೋಷಿಸಿರುವ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆಗೊಂಡಿದ್ದಾರೆ.

ಸುಮಾರು 39 ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ 55 ವರ್ಷದ ಹವ್ಯಾಸಿ ಮಹಿಳಾ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಪ್ರಸಿದ್ಧ ಭಾಗವತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗಳು (ಮಗಳ ಮಗಳು). ಹಾಗೂ ಬಂಟ್ವಾಳ ತಾಲೂಕಿನ ಕೋಡಪದವು ನಿವಾಸಿ ಪ್ರಗತಿಪರ ಕೃಷಿಕ ಪುರಂದರವಿಠಲ ಕುಕ್ಕಿಲ ಅವರ ಪತ್ನಿ.
ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕೆರೆಮೂಲೆ ಎಂಬಲ್ಲಿ 1971 ಮೇ 30ರಂದು ಕೃಷ್ಣ ಭಟ್ಟ ಮತ್ತು ದ್ರೌಪದಿ ಅಮ್ಮ ಅವರ ಪುತ್ರಿಯಾಗಿ ಜನಿಸಿದ ಅವರ (ತಾಯಿಯ ತಂದೆ) ಅಜ್ಜ ಪ್ರಸಿದ್ಧ ಕಲಾವಿದರಾದ ಮಾಂಬಾಡಿ ನಾರಾಯಣ ಭಾಗವತರು. ಸೋದರಮಾವ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರೂ ಹಿಮ್ಮೇಳ ಗುರುಗಳು.

ಬಾಲ್ಯದಲ್ಲೇ ತನ್ನ ಸಹೋದರರ ಪ್ರೇರಣೆಯಿಂದ ಯಕ್ಷಗಾನ ಕಲಿತವರು. ಅಣ್ಣಂದಿರು (ಶಂಕರನಾರಾಯಣ ಭಟ್ ಬಾಯಾರು ಮತ್ತು ನಾರಾಯಣ ಭಟ್) ಅಜ್ಜ ಮಾಂಬಾಡಿ ನಾರಾಯಣ ಭಾಗವತರಲ್ಲಿ ಯಕ್ಷಗಾನ ಹಿಮ್ಮೇಳ ಅಭ್ಯಸಿಸಿ, ಮನೆಯಲ್ಲಿ ಕಲಿಯುತ್ತಿದ್ದುದು ಅದು ಪೂರಕವಾಯಿತು. ಅಣ್ಣ ನಾರಾಯಣ ಭಟ್ ಅವರಿಂದ ಪೂರ್ವರಂಗದ ಪಾಠ ಹೇಳಿಸಿಕೊಂಡ ಅವರು, 1987ರಲ್ಲಿ ಮೊದಲ ಬಾರಿ ಬಯಲಾಟದಲ್ಲಿ ವೇದಿಕೆಯಲ್ಲಿ ಭಾಗವತಿಕೆ ಮಾಡಿದ್ದರು.
1993ರಿಂದ ಆಕಾಶವಾಣಿ ಕಲಾವಿದೆಯಾದ ಅವರು, ಅನೇಕ ಸಂಘ, ಸಂಸ್ಥೆ, ಹವ್ಯಾಸಿ ಆಟ, ತಾಳಮದ್ದಳೆ, ಮಹಿಳಾ, ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ವೇದಿಕೆಯನ್ನೇರಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗಿರುವುದು ಸಂತಸ ತಂದಿದೆ ಎಂದವರು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!