ಮಂಗಳೂರು: ಪಿಲಿಕುಳ ಸಂಸ್ಕೃತಿ ಗ್ರಾಮದ ಗುತ್ತು ಮನೆಯಲ್ಲಿ ಆ.16ರಂದು ಸಾಂಪ್ರದಾಯಿಕ ‘ಆಟಿಕೂಟ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ 11ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ಗುರು ಮಾರುತಿ ಹೌಂದೇರಾಯನ ಜನಪದ ನೃತ್ಯ ತಂಡದಿಂದ ನಶಿಸಿಹೋಗುತ್ತಿರುವ ವಿಶಿಷ್ಟ ಜಾನಪದ ನೃತ್ಯ ಪ್ರಕಾರವಾದ ‘ಹೌಂದೇರಾಯನ ಓಲಗ’ವನ್ನು ಪ್ರಸ್ತುತಪಡಿಸಲಾಗುವುದು.

ಜನಪದ ಕಲೆ, ಆಚರಣೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ವಿಶಿಷ್ಟ ಜಾನಪದ ನೃತ್ಯ ರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಡಾ. ಅಶೋಕ್ ಆರ್., ಉಪಸಮಿತಿ ಅಧ್ಯಕ್ಷ ಡಾ. ಶ್ರೀನಿಕೇತನ, ಪ್ರಮುಖರಾದ ರಾಮಕೃಷ್ಣ ಹಾಗೂ ಡಾ. ನಿತಿನ್ ಬಾಳೆಪುಣಿ ಉಪಸ್ಥಿತರಿದ್ದರು.

