ಉಳ್ಳಾಲ:ವಾಲ್ಮೀಕಿ ನಿಗಮದ ಹಗರಣದಲ್ಲಿ ಶಾಮೀಲಾಗಿರುವವರ ಮತ್ತಷ್ಟು ಹೆಸರುಗಳನ್ನ ಬಹಿರಂಗಗೊಳಿಸುತ್ತಾರೆಂಬ ನಡುಕದಿಂದ ಹಗರಣದ ರೂವಾರಿ ನಾಗೇಂದ್ರ ಅವರಿಗೆ ಮುಖ್ಯ ಮಂತ್ರಿ ಡಿಕೆಶಿ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಕಲ್ಪಿಸಿ ಕೊಡಲಾಗಿದೆ.ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಅವರು ರಾಜ್ಯ ಸರಕಾರವನ್ನು ಎಚ್ಚರಿಸಿದರು.

ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ,ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ವತಿಯಿಂದ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಬುಧವಾರದಂದು ನಡೆದ
ಪ್ರತಿಭಟನೆಯನ್ನುದ್ಧೇಶಿಸಿ ಅವರು ಮಾತನಾಡಿದರು.ಸಚಿವ ಸ್ಥಾನದಲ್ಲಿದ್ದಾಗಲೇ ವಾಲ್ಮೀಕಿ ನಿಗಮದ 89.63 ಕೋಟಿ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿದ ಆರೋಪ ಹೊತ್ತು ಜೈಲಿಗೆ ಹೋಗಿದ್ದ ಕಳಂಕಿತ ಶಾಸಕ ನಾಗೇಂದ್ರ ಅವರನ್ನ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡಿಸಿರುವುದು ನಾಚಿಕೆಕೇಡಿನ ವಿಚಾರವಾಗಿದೆ.ಕಾಂಗ್ರೆಸಿನವರು ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆಂದು ಹೇಳಿ ಜನರಲ್ಲಿ ಓಟು ಕೇಳಿದ್ದರು.ಆದರೆ ಇದೀಗ ಭ್ರಷ್ಟಾಚಾರ ಆರೋಪ ಹೊತ್ತವರನ್ನೇ ಸಚಿವರನ್ನಾಗಿಸುವ ಮೂಲಕ ಮುಖ್ಯಮಂತ್ರಿ ಡಿಕೆಶಿ ಅವರೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದರೇ ಎಂಬ ಸಂಶಯ ಮೂಡಿದೆಯೆಂದರು.


ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಪೂಜಾ ಪೈ,ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ,ಜಿಲ್ಲಾ ವಕ್ತಾರರಾದ ಜೀವನ್ ಕುಮಾರ್ ತೊಕ್ಕೊಟ್ಟು,ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ಹೇಮಂತ್ ಶೆಟ್ಟಿ,ಕೋಟೆಕಾರು ಪ.ಪಂ ಅಧ್ಯಕ್ಷೆ ದಿವ್ಯಾ ಶೆಟ್ಟಿ,ಮಂಡಲ ಉಪಾಧ್ಯಕ್ಷರುಗಳಾದ ಸುಮನಾ ಹರೀಶ್ ಶೆಟ್ಟಿ,ಮನೋಜ್ ಆಚಾರ್ಯ,ಶೈಲೇಶ್ ಶೆಟ್ಟಿ ತಲಪಾಡಿ,ಕಾರ್ಯದರ್ಶಿಗಳಾದ ರಮೇಶ್ ಬೆದ್ರೋಳಿಕೆ,ಭರತ್ ರಾಜ್ ಗಟ್ಟಿ,ಕಿಶೋರ್ ಕುತ್ತಾರು,ಬಿಜೆಪಿ ಯುವ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ನಿಶಾನ್ ಪೂಜಾರಿ,ಮಂಡಲ ಅಧ್ಯಕ್ಷ ಮುರಳೀ ಕೊಣಾಜೆ,ಮಹಿಳಾ ಮೋರ್ಚ ಮಂಡಲ ಅಧ್ಯಕ್ಷೆ ಮಾಧವಿ ಉಳ್ಳಾಲ್,ಪ್ರ.ಕಾ ಸ್ವಪ್ನ ಶೆಟ್ಟಿ,ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರುಗಳಾದ ಸುರೇಂದ್ರ ಶೆಟ್ಟಿ,ಪುರುಷೋತ್ತಮ ಗಟ್ಟಿ ಪರ್ಯತ್ತೂರು,ಅಶೋಕ್ ಕೆಂಜಿಲ,ನಿತ್ಯಾನಂದ ಭಂಡಾರಿ,ಮಂಡಲ ಕಾರ್ಯಾಲಯ ಕಾರ್ಯದರ್ಶಿ ಸುಜಾತ ಶೆಟ್ಟಿ,ಪ್ರಮುಖರಾದ ಜಿತೇಂದ್ರ ಶೆಟ್ಟಿ,ಹರಿಯಪ್ಪ ಸಾಲ್ಯಾನ್,ಅತುಲ್ ಬಗಂಬಿಲ,ಸಿದ್ಧೀಕ್ ತಲಪಾಡಿ,ಸಿರಾಜ್ ಮುಡಿಪು,ಪದ್ಮನಾಭ ಗಟ್ಟಿ,ದೀಕ್ಷಿತ್ ಉಳ್ಳಾಲ ಬೈಲ್,ಶರಣ್ ಶೆಟ್ಟಿ,ಆನಂದ ಶೆಟ್ಟಿ,ಗಣೇಶ್ ಭಂಡಾರಿ ನಡಾರ್ ಮೊದಲಾದವರು ಉಪಸ್ಥಿತರಿದ್ದರು.
ಮಂಡಲ ಪ್ರ.ಕಾ ದಯಾನಂದ ತೊಕ್ಕೊಟ್ಟು ಸ್ವಾಗತಿಸಿ,ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ವಂದಿಸಿದರು.


***ಪರಿಹಾರ ನೀಡುವುದರಲ್ಲೂ ಪಕ್ಷಪಾತವೇಕೆ..?
ಇತ್ತೀಚಿಗೆ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದ ಮೆಸ್ಕಾಂ ಲೈನ್ ಮೆನ್ ಮನೆಗೆ ಸಚಿವ ಖಾದರ್ ಅವರು ತೆರಳಿ ಪರಿಹಾರದ ಆದೇಶ ಪತ್ರ ನೀಡಿದ್ದರು.ವಿಮಾ ಕಂಪನಿಯೇ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕ್ರಿಯೆ ನಡೆಸುವಾಗ ಇದರ ಮಧ್ಯೆ ಖಾದರ್ ಅವರು ನಾಟಕ ಮಾಡುವುದು ಯಾಕೆ.ಮನುಷತ್ವ ಇದ್ರೆ ಲೈನ್ ಮೆನ್ ಕುಟುಂಬಕ್ಕೆ ಸರಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಕಾರ್ಯವನ್ನು ಖಾದರ್ ಮಾಡಬೇಕಿತ್ತು.ಕಳೆದ ವರುಷ ನಡೆದಿದ್ದ ಮಂಜನಾಡಿ ಗುಡ್ಡ ಕುಸಿತ ದುರಂತದಲ್ಲಿ ತನ್ನ ಅತ್ತೆ ಹಾಗೂ ಇಬ್ಬರು ಪುಟ್ಟ ಕಂದಮ್ಮಗಳಲ್ಲದೆ,ತನ್ನೆರಡೂ ಕಾಲುಗಳನ್ನ ಕಳಕೊಂಡು ಅಂಗವಿಕಲೆಯಾಗಿದ್ದ ಅಶ್ವಿನಿ ಅವರಿಗೆ ಬಿಜೆಪಿ ಹಾಗೂ ಆರ್ ಎಸ್ಎಸ್ ಮಾತ್ರ ಸಹಾಯ ಹಸ್ತ ಚಾಚಿತ್ತು.ಪರಿಹಾರ ನೀಡುವುದರಲ್ಲೂ ಖಾದರ್ ಅವರು ಪಕ್ಷಪಾತ ಮಾಡುವುದು ಸರಿಯೇ ಎಂದು ಮೋಹನ್ ರಾಜ್ ಪ್ರಶ್ನಿಸಿದರು.

