ಮಂಗಳೂರು: ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಈ ಕುರಿತು ಸಹಕಾರಿ ನಿಬಂಧಕರಿಗೆ ದೂರು ಸಲ್ಲಿಸಲಾಗಿದೆ ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪವನ್ ರಾಜ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಿಂದಿನ ಮಹಾಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ ನಗರ ಹಾಗೂ ಸಂಘದ ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರಗೊಂಡ ಸುಮಾರು 15 ದಿನಗಳಲ್ಲೇ ವೈಯಕ್ತಿಕ ಕಾರಣ ನೀಡಿ ಉಮೇಶ್ ಬೆಂಜನಪದವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಿದರು.

ಬಳಿಕ ಹೊಸ ಮಹಾಸಭೆ ಕರೆಯದೆ, ಹಲವು ಆಕ್ಷೇಪಗಳ ನಡುವೆಯೇ ಮಾಸಿಕ ಸಭೆಯಲ್ಲಿ ಚಿದಾನಂದ ಗುರಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇದಾದ ಬಳಿಕ ಸಂಘದ ಆಡಳಿತ ಕ್ರಮಗಳ ಕುರಿತು ಕಾರ್ಯಕಾರಿ ಸಮಿತಿಯೊಳಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಪವನ್ ರಾಜ್ ಆರೋಪಿಸಿದರು.
ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರ ಅವಧಿಯಲ್ಲಿ ನೂತನ ಸಭಾಂಗಣ ನಿರ್ಮಾಣದ ಸಂದರ್ಭದಲ್ಲಿ ಹಣಕಾಸಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ಅವರ ಕುಟುಂಬಕ್ಕೆ ಸೇರಿದ ಜಮೀನನ್ನು ಭಗವತಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸುಮಾರು ₹30 ಲಕ್ಷ ಸಾಲ ಪಡೆದು ಸಭಾಂಗಣ ನಿರ್ಮಾಣಕ್ಕೆ ಬಳಸಲಾಗಿತ್ತು ಎಂದು ಸಭೆಗಳಲ್ಲಿ ತಿಳಿಸಲಾಗಿತ್ತು. ಸಭಾಂಗಣದಿಂದ ತಿಂಗಳಿಗೆ ಸುಮಾರು ₹1 ಲಕ್ಷ ಬಾಡಿಗೆ ಆದಾಯ ಬರುವಂತೆ ವ್ಯವಸ್ಥೆ ಮಾಡಲಾಗಿದ್ದು, ಅದೇ ಆದಾಯದಿಂದ ಬ್ಯಾಂಕ್ ಸಾಲದ ಕಂತುಗಳನ್ನು ಪಾವತಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.

ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಚಂದ್ರಹಾಸ್ ಉಳ್ಳಾಲ್ ಅವರು ಸಾಧ್ಯವಾದಷ್ಟು ಬೇಗ ಸಾಲ ತೀರಿಸಿ ಅಡಮಾನದಲ್ಲಿರುವ ದಾಖಲೆಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಿಕೊಂಡಿದ್ದರು. ನಂತರದ ಸಭೆಯಲ್ಲಿ ಬ್ಯಾಂಕ್ ಸಾಲ ಹಾಗೂ ಇತರ ಬಾಕಿಗಳನ್ನು ಸೇರಿಸಿ ಒಟ್ಟು ಸುಮಾರು ₹36 ಲಕ್ಷ ಬಾಧ್ಯತೆ ಇದೆ ಎಂದು ತಿಳಿಸಲಾಗಿತ್ತು. ಆದರೆ ಈ ಕುರಿತು ಲೆಕ್ಕಪತ್ರಗಳನ್ನು ಮಂಡಿಸುವಂತೆ ಕೇಳಿಕೊಂಡರೂ ಇದುವರೆಗೆ ಯಾವುದೇ ಲೆಕ್ಕಪತ್ರ ಮಂಡನೆಯಾಗಿಲ್ಲ ಎಂದು ಆರೋಪಿಸಿದರು.
ಇದೇ ರೀತಿ, ದಾನಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಮಹಾದ್ವಾರ ನಿರ್ಮಿಸಲಾಗಿದ್ದು, ಅದರ ನಕ್ಷೆ, ನಿರ್ಮಾಣದ ಗುತ್ತಿಗೆ ಯಾರಿಗೆ ನೀಡಬೇಕು, ಗುತ್ತಿಗೆದಾರರನ್ನು ಹೇಗೆ ಆಯ್ಕೆ ಮಾಡಬೇಕು ಹಾಗೂ ಯಾವ ರೀತಿಯಲ್ಲಿ ನಿರ್ಮಾಣ ಕೈಗೊಳ್ಳಬೇಕು ಎಂಬ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಪವನ್ ರಾಜ್ ದೂರಿದರು.

“ನಮಗೆ ಯಾವುದೇ ಸಂಘರ್ಷ ಮಾಡುವ ಉದ್ದೇಶವಿಲ್ಲ. ಇದು ನಮ್ಮದೇ ಸಂಘ, ನಮ್ಮದೇ ಸಮಾಜ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಆದರೆ ಸಂಘದ ಬೈಲಾ ಪ್ರಕಾರ ಆಡಳಿತ ನಡೆಯಬೇಕು. ಲೆಕ್ಕಪತ್ರಗಳು ಪಾರದರ್ಶಕವಾಗಿರಬೇಕು. ಕಾರ್ಯಕಾರಿ ಸಮಿತಿಗೆ ಅದರ ಹಕ್ಕು ಮತ್ತು ಜವಾಬ್ದಾರಿಗಳನ್ನು ನೀಡಬೇಕು ಎಂಬುದು ನಮ್ಮ ಆಗ್ರಹ,” ಎಂದು ಅವರು ಹೇಳಿದರು.
ಲೆಕ್ಕಪತ್ರಗಳ ಕುರಿತು ಪ್ರಶ್ನಿಸಿದಾಗ ದೂರವಾಣಿ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಕೈಕಾಲು ಕಡಿಯುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ ಅವರು, ಈ ಕುರಿತು ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿದ್ದರೂ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಇದುವರೆಗೆ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದ ಮಾಜಿ ಉಪಾಧ್ಯಕ್ಷ ದೇವದಾಸ್ ಕೊಲ್ಯ ಉಪಸ್ಥಿತರಿದ್ದರು.

